ಉಡುಪಿ: ಮೇ ಮಾಹೆಯಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಉಡುಪಿ, ಬ್ರಹ್ಮಾವರ ಮತ್ತು ಕಾಪು
ತಾಲ್ಲೂಕಿನಾದ್ಯಂತ ಅಡಿಕೆ ತೋಟಗಳಲ್ಲಿ ಅಡಿಕೆ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಮಳೆ ಹಾಗೂ ಬಿಸಿಲು ಮಿಶ್ರಿತ ವಾತಾವರಣ, ಮಣ್ಣಿನಲ್ಲಿ ಹೆಚ್ಚಿದ ತೇವಾಂಶ ರೋಗ ಉಲ್ಬಣವಾಗಲು ಸಹಕಾರಿಯಾಗುತ್ತದೆ.
ಆದ್ದರಿಂದ ರೈತರು ಬೆಳೆ ಸಂರಕ್ಷಣೆ ಉದ್ದೇಶದಿಂದ ಈ ಕೆಳಗಿನ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ.
ತೋಟದಲ್ಲಿ ಬಿದ್ದ ಕೊಳೆರೋಗ ಭಾದಿತ, ಹಸಿರು ಕಾಯಿಗಳನ್ನು ಹಾಗೂ ಪೂರ್ಣ ಕೊಳೆ ಬಂದು ಒಣಗಿದ ಸಿಂಗಾರಗಳನ್ನು ಸಂಗ್ರಹಿಸಿ ಹೊರ ಸಾಗಿಸಿ ಸುಡಬೇಕು. ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಸಿಗಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಅಡಿಕೆ ಮರದ ಬುಡ ಭಾಗವು ಸಾಮಾನ್ಯ ಮಟ್ಟಕ್ಕಿಂತ ತಗ್ಗು ಇದ್ದಲ್ಲಿ, ಅಲ್ಲಿ ನೀರು ನಿಲ್ಲದಂತೆ
ನೋಡಿಕೊಳ್ಳಬೇಕು.
ತೋಟದಲ್ಲಿ ಹಾಗೂ ಸುತ್ತಲೂ ಬೆಳೆದ ಕಾಡು ಮರಗಳ ರೆಂಬೆಗಳನ್ನು ಕತ್ತರಿಸಿ, ತೋಟದಲ್ಲಿ ಸರಿಯಾಗಿ ಗಾಳಿ ಬೆಳಕು ಆಡುವಂತೆ ಕ್ರಮವಹಿಸಬೇಕು. ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ನಿಯಮಿತವಾಗಿ ಒದಗಿಸಬೇಕು. ಕೊಳೆ ರೋಗ ಭಾದಿತ ತೋಟಗಳಲ್ಲಿ ತುರ್ತು ನಿಯಂತ್ರಣಕ್ಕಾಗಿ ಮೆಟಲಾಕ್ಸೆಲ್ 35% ಶಿಲೀಂದ್ರ ನಾಶಕವನ್ನು 1.50 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಸಿಂಪರಣೆ ನಂತರ ಕನಿಷ್ಠ 2 ಗಂಟೆಗಳ ಮಳೆ ರಹಿತ ವಾತಾವರಣ ಅವಶ್ಯ. ಒಂದು ವಾರದ ತರುವಾಯ ಶೇ. 1ರ ಬೋರ್ಡೋ ದ್ರಾವಣ ಸಿಂಪರಣೆ ಕೈಗೊಳ್ಳಬೇಕು. ಕೊಳೆ ಭಾದಿತ ತೋಟಗಳಲ್ಲಿ ಈ ಮೇಲಿನ ಸಿಂಪರಣೆಗಳನ್ನು ಕೈಗೊಳ್ಳುವಾಗ ಅಡಿಕೆ ಗೊನೆಗಳಿಗೆ ಮಾತ್ರ ಸಿಂಪಡಿಸದೇ ಸುಳಿ, ಸೋಗೆ ಹಾಗೂ ಹೊಡೆ ಭಾಗಗಳಿಗೂ ಸಿಂಪಡಿಸುವುದರಿಂದ ಮುಂದೆ ಬರುವ ಶಿರ ಕೊಳೆರೋಗ ಹಾಗೂ ಸುಳಿ ಕೊಳೆರೋಗಗಳನ್ನು ನಿಯಂತ್ರಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ಅಧಿಕಾರಿಗಳನ್ನು ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.












