ಉಡುಪಿ: ಮೂರನೇ ದಿನಕ್ಕೆ ಕಾಲಿಟ್ಟ ಕಟ್ಟಡ ನಿರ್ಮಾಣ ಕಾರ್ಮಿಕರ ಧರಣಿ

ಉಡುಪಿ: ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ‌ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕೆಲಸ ಇಲ್ಲದೆ ಕಾರ್ಮಿಕರು ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಸ್ಪಂದಿಸುತ್ತಿಲ್ಲ. ಕೆಂಪು ಕಲ್ಲು ಕೊರತೆ ಇಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಹಾಗಾದರೆ ಕೆಂಪು ಕಲ್ಲು ಬೆಲೆ ದುಬಾರಿ ಆಗಿರುವುದು ಯಾಕೆಂದು ಉತ್ತರಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಕಾನೂನು ಬದ್ಧ ಪರವಾನಿಗೆ ನೀಡಿದ ಕೋರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗುಣಮಟ್ಟದ ಕಲ್ಲು ಸಿಗುವ ಹೊಸ ಸ್ಥಳದಲ್ಲಿ ಪರವಾನಿಗೆ ನೀಡಬೇಕು. ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಕಾರ್ಮಿಕರ ಸಂಘಟನೆಗಳ ಜೊತೆ ಜಂಟಿ ಸಭೆ ನಡೆಸಬೇಕು. ಇಲ್ಲದಿದ್ದರೆ ಧರಣಿ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು‌.

ಸಿಐಟಿಯು ರಾಜ್ಯಾಧ್ಯಕ್ಷರಾದ ಬಾಲಕಥಷ್ಣ ಶೆಟ್ಟಿ ಮಾತನಾಡಿ, ಮರಳು ಸಮಸ್ಯೆ ಬಗೆಹರಿಸಲು ಪ್ರತಿ ವರ್ಷ ಮೇ ತಿಂಗಳಲ್ಲಿ ಮುಂದಿನ ಆಗಸ್ಟ್ ತಿಂಗಳಲ್ಲಿ ಕೊರತೆಯಾಗುವ ಮರಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ಮನವಿ ನೀಡಿದರೂ ಕಡೆಗಣನೆ ಮಾಡಲಾಗುತ್ತಿದೆ. ಮುಂದೆ ಕೆಂಪು ಕಲ್ಲು ಸಮಸ್ಯೆ ಜೊತೆ ಮರಳು ಸಮಸ್ಯೆಯನ್ನೂ ಜಿಲ್ಲಾಡಳಿತ ಸೃಷ್ಟಿ ಮಾಡಿದೆ. ಎಂದು ಅವರು ದೂರಿದರು.

ಧರಣಿಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ ಶಂಕರ್, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಚಂದ್ರಶೇಖರ ವಿ, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಸುಭಾಷ್ ಚಂದ್ರ ನಾಯಕ್, ರಾಜೀವ ಪಡುಕೋಣೆ, ಕಟ್ಟಡ ಕಾರ್ಮಿಕರಾದ ರಾಮ ಕಾರ್ಕಡ, ಸಯ್ಯದ್ ಅಲಿ, ನಾಗೇಶ್ ಆಚಾರ್ಯ ಕಾರ್ಕಳ,ಸರೋಜ ಮಾತನಾಡಿದರು.

ಧರಣಿಯಲ್ಲಿ ಸಿಐಟಿಯು ಮುಖಂಡರಾದ ಉಮೇಶ್ ಕುಂದರ್,ನಳಿನಿ, ಶಶಿಧರ ಗೊಲ್ಲ,ವಾಮನ ಪೂಜಾರಿ, ಕವಿರಾಜ್ ಎಸ್ ಕಾಂಚನ್,ಮೋಹನ, ದಯಾನಂದ ಕೋಟ್ಯಾನ್ ಮೊದಲಾದವರಿದ್ದರು.