ಉಡುಪಿ: ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿ ವತಿಯಿಂದ ವಿವಿಧ ಮಠ, ಸಂಘಟನೆ ಹಾಗೂ ದಾನಿಗಳ ಸಹಕಾರದೊಂದಿಗೆ ಸಂಗ್ರಹಿಸಲಾದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಮೂಲಕ ಕೋವಿಡ್ 19 ನಿಂದಾಗಿ ಸಂಕಷ್ಟಗೀಡಾದ ಕೂಲಿ ಕಾರ್ಮಿಕರು ಹಾಗೂ ಬಡಜನರಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಚಾಲನೆ ನೀಡಲಾಯಿತು.
ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಯು.ಆರ್. ಸಭಾಪತಿ ಮಾತನಾಡಿ, ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿ ವತಿಯಿಂದ ಜಿಲ್ಲೆಯ ಪ್ರತಿ ಬ್ಲಾಕ್ ಮಟ್ಟದಲ್ಲಿ ವಿವಿಧ ಸಂಘಟನೆ ಹಾಗೂ ದಾನಿಗಳ ಸಹಕಾರದೊಂದಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಪ್ರತಿ ಬ್ಲಾಕ್ ಮಟ್ಟದಲ್ಲಿ ಬಡವರಿಗೆ 10 ಸಾವಿರ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಈಗಾಗಲೇ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಮೂಲಕ 20 ಟನ್ ಕ್ಕಿಂತಲೂ ಹೆಚ್ಚಿನ ಅಕ್ಕಿಯನ್ನು ವಿತರಿಸಲಾಗಿದೆ. ಅದಮಾರು ಮಠ, ಪುತ್ತಿಗೆ ಮಠ, ಪೇಜಾವರ ಮಠ ಹಾಗೂ ಇತರ ದಾನಿಗಳ ನೆರವಿನೊಂದಿಗೆ ಉಡುಪಿ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 2500ರಿಂದ 3 ಸಾವಿರ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಉಡುಪಿ ಜಿಲ್ಲೆಯ ಜನರು ಲಾಕ್ ಡೌನ್ ನಿಯಮಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಶೇ. 30ರಷ್ಟಿದ್ದ ಪಡಿತರ ಕಾರ್ಡ್ ಗಳನ್ನು ಶೇ. 75ರಿಂದ 80ಕ್ಕೆ ಏರಿಕೆ ಮಾಡಿದ್ದರಿಂದ ಇಂದು ಯಾರು ಖಾಲಿ ಹೊಟ್ಟೆಯಲ್ಲಿ ಇರುವ ಪರಿಸ್ಥಿತಿ ಉದ್ಭವಿಸಿಲ್ಲ. ಆದರೆ ಪ್ರಸ್ತುತ ರಾಜ್ಯ ಸರ್ಕಾರವು ಹಿಂದೆ ಪ್ರತಿ ಕುಟುಂಬದ ಸದಸ್ಯರಿಗೆ ನೀಡಲಾಗುತ್ತಿದ್ದ ಏಳು ಕೆಜಿ ಅಕ್ಕಿಯಲ್ಲಿ ಎರಡು ಕೆಜಿ ಅಕ್ಕಿಯನ್ನು ಕಡಿತಗೊಳಿಸಿ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ನೀಡಿದೆ. ಆದರೆ ಸಕ್ಕರೆ, ಬೇಳೆ, ಎಣ್ಣೆ ಮೊದಲಾದ ಅಗತ್ಯ ಸಾಮಗ್ರಿಗಳನ್ನು ನೀಡಿಲ್ಲ ಎಂದು ದೂರಿದರು.
ಕೋವಿಡ್ 19 ಹತೋಟಿಗೆ ಸರ್ಕಾರ ಕೈಗೊಂಡ ಎಲ್ಲ ಕ್ರಮಗಳಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಿದೆ. ಯಾವುದೇ ರಾಜಕೀಯ ಮಾಡುವ ಕೆಲಸ ಮಾಡಿಲ್ಲ. ಅಲ್ಲದೆ ಪಕ್ಷವು ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಿಕೊಂಡು ದಾನಿಗಳ ನೆರವಿನೊಂದಿಗೆ ಬಡವರಿಗೆ ಆಹಾರದ ಕಿಟ್ ವಿತರಣೆ ಮಾಡಿದೆ. ಹಾಗೆಯೇ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಮಿತಿಗಳನ್ನು ರಚಿಸಿಕೊಂಡು ದಾನಿಗಳ ನೆರವಿನೊಂದಿಗೆ ಬಡವರಿಗೆ ಅಕ್ಕಿ, ದಿನಸಿ, ಹಾಲು ಮೊದಲಾದ ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ಕೆಲಸ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕಾ ಕರ್ನೇಲಿಯೊ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಮಹಾಬಲ ಕುಂದರ್, ರಮೇಶ್ ಕಾಂಚನ್, ಉದ್ಯಾವರ ನಾಗೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.