ಉಡುಪಿ: ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ನೀಡುವುದರ ಮೂಲಕ ಹಿರಿಯ ವ್ಯಕ್ತಿಗಳು ಕೋವಿಡ್ ಗೆ ಬಲಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಜಿಲ್ಲಾ ಪರಿಣಿತರ ಸಮಿತಿ ಸಭೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಮೊದಲೇ ಡೋಸ್ ಪಡೆದು ಎರಡನೇ ಡೋಸ್ ಬಾಕಿಯಿರುವ ಹಿರಿಯ ನಾಗರಿಕರ ವಿವರಗಳನ್ನು ಪಡೆದು ಅವರಿಗೆ ಅವರ ವಾಸಸ್ಥಳದ ಸಮೀಪವೇ ಲಸಿಕೆಗೆ ವ್ಯವಸ್ಥೆ ಮಾಡಬೇಕು ಎಂದರು.
ಖಾಸಗಿಯಾಗಿ ಈಗಾಗಲೇ ಲಸಿಕೆ ಪಡೆದಿರುವ ಹಿರಿಯ ನಾಗರಿಕರ ವಿವರಗಳನ್ನೂ ಸಹ ಪಡೆದು, ಅವರಿಗೂ ಲಸಿಕೆಗೆ ವ್ಯವಸ್ಥೆ ಮಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಹ ಅಲ್ಲಿಯೇ ಕ್ಯಾಂಪ್ ಏರ್ಪಡಿಸಿ ಲಸಿಕೆ ನೀಡಲು ವ್ಯವಸ್ಥೆ ಮಾಡಿ. ಜಿಲ್ಲೆಯಲ್ಲಿರುವ ಎಲ್ಲಾ ಹಿರಿಯ ನಾಗರಿಕರಿಗೆ ಎರಡೂ ಡೋಸ್ ಲಸಿಕೆ ನೀಡುವುದರ ಮೂಲಕ ಅವರು ಕೋವಿಡ್ ಗೆ ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟರಿಗೆ ಲಸಿಕೆ ನೀಡಲು 413861 ಗುರಿ ಹೊಂದಿದ್ದು, ಇದುವರೆಗೆ 332255 ಮಂದಿಗೆ ಪ್ರಥಮ ಡೋಸ್ ನೀಡಿ ಶೇ. 80 ರಷ್ಟು ಗುರಿ ಸಾಧನೆ ಮಾಡಲಾಗಿದೆ. 169499 ಮಂದಿಗೆ ಎರಡನೇ ಡೋಸ್ ನೀಡಿ, ಶೇ. 41ರಷ್ಟು ಸಾಧನೆ ಮಾಡಿದ್ದು, ಇದರಲ್ಲಿ ಇನ್ನೂ ಹೆಚ್ಚಿನ ಗುರಿ ಸಾಧಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಹಿರಿಯ ನಾಗರಿಕರು ಶೇ. 100ರಷ್ಟು ಸಂಪೂರ್ಣ ಎರಡೂ ಲಸಿಕೆ ಪಡೆಯುವಂತೆ ಕಾರ್ಯಕ್ರಮ ರೂಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಡಿಎಚ್ಓ ಡಾ. ನಾಗಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಹಾಗೂ ಎಕ್ಸ್ಪರ್ಟ್ ಸಮಿತಿಯ ವಿವಿಧ ವೈದ್ಯರು ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.