ಉಡುಪಿ: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್(ಸಿಎಸ್‌ಎಲ್)ನ ಮಾಲಕತ್ವದ ಅಂಗಸಂಸ್ಥೆಯಾದ ಮಲ್ಪೆ ಬಂದರಿನಲ್ಲಿ ಕಾರ್ಯಚರಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ನಾರ್ವೆಯ ವಿಲ್ಸನ್ ಎಎಸ್‌ಎ ಕಂಪೆನಿಗೆ ನಿರ್ಮಿಸುತ್ತಿರುವ 3,800 ಟಿಡಿಡಬ್ಲ್ಯೂ ಸಾಮಾನ್ಯ ಸರಕು ಸಾಗಣೆ ಹಡಗುಗಳ ಸರಣಿಯ ಮೂರನೇ ಹಡಗನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು.
ಉಡುಪಿ ಶಿಪ್‌ಯಾರ್ಡ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಹಡಗನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕೃತವಾಗಿ ಜಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾರ್ವೆಯ ಡ್ರೈ ಡಾಕ್ಸ್ ಆ್ಯಂಡ್ ಪ್ರೊಜೆಕ್ಟ್‌ನ ಫ್ಲೀಟ್ ಮೆನೇಜರ್ ಗೇರ್ ಓವೆಲಮ್ ಹಾಜರಿದ್ದರು. ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಹರಿಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಜಿಎಂ ಗೋಕುಲ್ ಪಿ.ಎನ್. ಶಿಪ್‌ನ ಕುರಿತು ಮಾಹಿತಿ ನೀಡಿದರು.
ಈ ಹೊಸ ಶಿಪ್ 89.43 ಮೀಟರ್ ಉದ್ದ, 13.2 ಮೀಟರ್ ಅಗಲ ಹಾಗೂ 4.2 ಮೀಟರ್ ಆಳ ಹೊಂದಿದೆ. ನೆದರ್ಲ್ಯಾಂಡ್‌ನ ಕೋನೋಶಿಪ್ ಇಂಟರ್ನ್ಯಾಷನಲ್ ವಿನ್ಯಾಸಗೊಳಿಸಿದ ಈ ಶಿಪ್ ಯುರೋಪಿನ ಕರಾವಳಿ ನೀರಿನಲ್ಲಿ ಕಾರ್ಯನಿರ್ವಹಿಸಲು ತಕ್ಕಂತೆ, ಪರಿಸರ ಸ್ನೇಹಿ ಡೀಸೆಲ್-ಎಲೆಕ್ಟ್ರಿಕ್ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿದೆ.
ಈ ಸರಣಿಯ ಮೊದಲ ಹಡಗು ‘ವಿಲ್ಸನ್ ಇಕೋ-1’ ಕಳೆದ ಎಪ್ರಿಲ್ 23ರಂದು ಹಸ್ತಾಂತರಗೊಂಡು ಯುರೋಪಿನಲ್ಲಿ ಕಾರ್ಯಚರಿಸುತ್ತಿದೆ. ಎರಡನೇ ಹಡಗು ‘ವಿಲ್ಸನ್ ಇಕೋ-2’ ಅಂತಿಮ ಹಂತದಲ್ಲಿದ್ದು, ಸೆ.11 ರಂದು ಹಸ್ತಾಂತರಕ್ಕೆ ಸಿದ್ಧವಾಗಲಿದೆ.
ವಿಲ್ಸನ್ ಎಎಸ್‌ಎ, ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಜೊತೆ 6,300 ಟಿಡಿಡಬ್ಲ್ಯೂ ಸಾಮಾನ್ಯ ಸರಕು ಸಾಗಣೆಯ ಎಂಟು ಹಡಗುಗಳ ಫಾಲೋ-ಆನ್ ಆರ್ಡರ್ ಕೂಡ ಮಾಡಿಕೊಂಡಿದೆ. ಇದರಿಂದ ಉಡುಪಿ ಶಿಪ್‌ಯಾರ್ಡ್‌ನ ಅಂತಾರಾಷ್ಟ್ರೀಯ ಹೆಜ್ಜೆಗುರುತು ಇನ್ನಷ್ಟು ಬಲಗೊಂಡಿದೆ. ಕೊಚ್ಚಿನ್ ಶಿಪ್‌ಯಾರ್ಡ್, ಉಡುಪಿ ಯಾರ್ಡ್‌ನ್ನು ಅಧೀನಕ್ಕೆ ಪಡೆದು ಕೊಂಡ ನಂತರ, ಉಡುಪಿ-ಸಿಎಸ್‌ಎಲ್ ಹಲವು ಪ್ರಮುಖ ಯೋಜನೆ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಭಾರತದ ಪ್ರಮುಖ ಟಗ್ ಆಪರೇಟರ್ ಗಳಿಗೆ 62 ಟನ್ ಮತ್ತು 70 ಟನ್ ಬೊಲ್ಲಾರ್ಡ್ ಪುಲ್ ಟಗ್‌ಗಳನ್ನು ನಿರ್ಮಿಸಿಕೊಟ್ಟಿದೆ. ಪ್ರಸ್ತುತ 70 ಟನ್ ಬೊಲ್ಲಾರ್ಡ್ ಪುಲ್ ಟಗ್‌ಗಳ 12 ಹಡಗುಗಳ ನಿರ್ಮಾಣ ಕಾರ್ಯವೂ ವಿವಿಧ ಹಂತಗಳಲ್ಲಿ ನಡೆಯುತ್ತಿದೆ ಎಂದು ಸಿಇಓ ಹರಿಕುಮಾರ್ ತಿಳಿಸಿದ್ದಾರೆ.












