ಸಹಕಾರಿ ಕ್ಷೇತ್ರದ ಮೇಲೆ ಜನರು ಇಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅಗತ್ಯ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಮಹಿಳಾ ವಿವಿದೋದ್ಧೇಶ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉಡುಪಿ ಲಿಕೋ ಬ್ಯಾಂಕ್ ನ ಡೈಮಂಡ್ ಜ್ಯುಬಿಲಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು‌.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು, ಉಡುಪಿ ಜಿಲ್ಲೆಯಲ್ಲಿರುವ ಸಹಕಾರಿ ಸಂಸ್ಥೆಗಳ ಪೈಕಿ 21 ಸಹಕಾರಿ ಸಂಸ್ಥೆಗಳನ್ನು ಕೇವಲ ಮಹಿಳೆಯರೇ ಮುನ್ನಡೆಸುತ್ತಿದ್ದಾರೆ. 750 ಸಹಕಾರಿ ಸಂಸ್ಥೆಗಳಲ್ಲಿ ಇಬ್ಬರು ಮಹಿಳಾ ನಿರ್ದೇಶಕರು ಕಡ್ಡಾಯವಾಗಿ ಇರಬೇಕು. ಸಹಕಾರಿ ಸಂಸ್ಥೆ ಎಂಬುವುದು ಖಾಸಗಿ ಸಂಸ್ಥೆಯಲ್ಲ, ಇದೊಂದು ಸರಕಾರಿ ಸ್ವಾಮ್ಯದ ಸಂಸ್ಥೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಕೇಂದ್ರ ಹಾಗೂ ರಾಜ್ಯದ ಜನಪ್ರತಿನಿಧಿಗಳು ಮನಗಂಡಿದ್ದಾರೆ ಎಂದರು.

ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.40ರಷ್ಟು ಮಂದಿ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜನರು ಸಹಕಾರಿ ಕ್ಷೇತ್ರದ ಮೇಲೆ ನಂಬಿಕೆ ವಿಶ್ವಾಸವನ್ನು ಇಟ್ಟಿದ್ದಾರೆ. ಅದನ್ನು ಉಳಿಸಿಕೊಂಡುವ ಹೋಗುವ ಕೆಲಸವನ್ನು ಎಲ್ಲ ಸಹಕಾರಿಗಳು ಮಾಡಬೇಕು ಎಂದು ಕರೆ ನೀಡಿದರು.

ಉಡುಪಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ಸ್ ಜಿಲ್ಲಾ ಗರ್ವನರ್ ಸಪ್ನಾ ಸುರೇಶ್, ಸಹಕಾರ ಯೂನಿಯನ್ ನಿರ್ದೇಶಕ ವೈ. ಸುಧೀರ್ ಕುಮಾರ್, ಮೂಡುಬಿದಿರೆ ಶ್ರೀ‌ದವಳ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂತೋಷ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ‌ ಅನುಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.