ಉಡುಪಿ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವಿವರ ಫಲಕ ಕಡ್ಡಾಯ: ಡಿಸಿ ಜಿ. ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ನೊಂದಾಯಿತವಾದ ಎಲ್ಲಾ ಆಸ್ಪತ್ರೆ, ಕ್ಲಿನಿಕ್‌ಗಳು, ತಮ್ಮಲ್ಲಿ ದೊರೆಯುವ ವಿವಿಧ ಚಿಕಿತ್ಸೆಗಳು, ಚಿಕಿತ್ಸೆಯ ದರಗಳು, ಚಿಕಿತ್ಸಾ ವಿಧಾನಗಳು (ಅಲೋಪತಿ, ಆಯುರ್ವೇದ ಇತ್ಯಾದಿ), ವೈದ್ಯರ ವಿವರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಇದು ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತಿರಬೇಕು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆ.ಪಿ.ಎಂ.ಇ ಯಡಿ ನೊಂದಾಯಿತ ಆಸ್ಪತ್ರೆಗಳು, ತಮ್ಮ ಅನುಮತಿಯ ನವೀಕರಣಕ್ಕೆ ಬರುವ ಸಂದರ್ಭದಲ್ಲಿ, ಕಾಯ್ದೆಯಡಿಯಲ್ಲಿನ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಕುರಿತು ಪರಿಶೀಲನೆ ನಡೆಸಿ, ಅನುಮತಿಯನ್ನು ನವೀಕರಿಸಬೇಕು. ಜಿಲ್ಲೆಯಲ್ಲಿ ಯಾವುದೇ ನಕಲಿ ವೈದ್ಯರು ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡದಂತೆ ಪರಿಶೀಲಿಸಿ, ನವೀಕರಣ ಮಾಡಿಸದ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಿ, ಅವರು ಹೊಸದಾಗಿ ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಪರವಾನಗಿ ನೀಡಲು ಕ್ರಮ ಕೈಗೊಳ್ಳಿ. ಖಾಸಗಿ ಆಸ್ಪತ್ರೆಗಳು ಕೆ.ಪಿ.ಎಂ.ಇ ಕಾಯ್ದೆಯ ಷರತ್ತುಗಳನ್ನು ಪಾಲಿಸುತ್ತಿರುವ ಕುರಿತಂತೆ, ಅನಿರೀಕ್ಷಿತ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದ ಕುರಿತಂತೆ, ಅನುಪಾತ ಪ್ರಮಾಣ 750 ಕ್ಕೂ ಕಡಿಮೆ ಇರುವ ಗ್ರಾಮ ಪಂಚಾಯತ್‌ಗಳನ್ನು ಪಟ್ಟಿ ಮಾಡಿ. ಈ ಗ್ರಾಮಗಳಲ್ಲಿ ಅನುಪಾತದ ವ್ಯತ್ಯಾಸಕ್ಕೆ ಸೂಕ್ತ ಕಾರಣಗಳ ಕುರಿತಂತೆ ಪರಿಶೀಲಿಸಿ, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ, ಭ್ರೂಣ ಲಿಂಗ ಪತ್ತೆ ಕುರಿತು ಪರಿಶೀಲನೆ ನಡೆಸಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮರಾವ್, ಆರೋಗ್ಯ ಇಲಾಖೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.