ಉಡುಪಿ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಶನ್ ಎಂಜಿನಿಯರ್ಸ್‌ ದಿನಾಚರಣೆ

ಉಡುಪಿ: ಉಡುಪಿ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಶನ್ (ಯುಸಿಇಎ) ವತಿಯಿಂದ ಕಿದಿಯೂರು ಹೊಟೇಲ್‌ನ ಅನಂತಶಯನ ಹಾಲ್‌ನಲ್ಲಿ ಬುಧವಾರ ಎಂಜಿನಿಯರ್ಸ್‌ ದಿನಾಚರಣೆ ನಡೆಯಿತು.

ಮಂಗಳೂರು ಅಸೋಸಿಯೇಶನ್ ಆಫ್ ವ್ಯಾಲ್ಯುವರ್ಸ್‌‌ನ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಪ್ರಾಮಾಣಿಕತೆ, ನಿರ್ವಂಚನೆಯಿಂದ ಕೆಲಸ ಮಾಡಿದಾಗ ಸತ್ಫಲ ದೊರೆಯುವುದರಲ್ಲಿ ಸಂಶಯವಿಲ್ಲ. ಸದಾ ಖುಷಿಯಿಂದ, ಎಲ್ಲರೊಂದಿಗೂ ಪ್ರೀತಿಯಿಂದ ಇದ್ದು ಸಿಕ್ಕಿದ್ದನ್ನು ದಕ್ಕಿಸಿಕೊಂಡು, ಇದ್ದುದರಲ್ಲಿ ಸಂತೃಪ್ತಿ ಪಡುವ ಗುಣ ಬೆಳೆಸಿಕೊಳ್ಳಬೇಕು. ನಮ್ಮನ್ನು ದ್ವೇಷಿಸುವವರಿಗೂ ಒಳತನ್ನು ಮಾಡುವಂತೆ ಪರಮಾತ್ಮನಲ್ಲಿ ಪ್ರಾರ್ಥಿಸುವ ಗುಣ ಬೆಳೆಸಿಕೊಂಡರೆ ಬೆಳೆಯಬಹುದು ಎಂದರು.

ಮಣಿಪಾಲದ ಡಿಪಾರ್ಟ್‌ಮೆಂಟ್ ಆಫ್ ಸಿವಿಲ್ ಎಂಜಿನಿಯರಿಂಗ್‌ನ ಪ್ರಾಧ್ಯಾಪಕ ಡಾ ಕಿರಣ್ ಕಾಮತ್ ಅವರು, ಸರ್.ಎಂ.ವಿ.ಸವರ ಆದರ್ಶ ಗುಣಗಳನ್ನು ಯುವ ಎಂನಿಯರ್ಗಳು ಮೈಗೂಡಿಸಿಕೊಂಡಾಗ ಹೊಸದನ್ನು ಆವಿಷ್ಕಾರ ಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಬಹುದು. ಸರ್.ಎಂ.ವಿ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅಂತಹ ಗುಣಗಳನ್ನು ಯುವ ಎಂಜಿನಿಯರ್ ಅಳವಡಿಸಿಕೊಂಡು ಬದುಕುವುದೇ ಅವರಿಗೆ ಕೊಡುವ ಬಹುದೊಡ್ಡ ಗೌರವವಾಗಿದೆ ಎಂದರು.

ಕಿದಿಯೂರು ಹೊಟೇಲ್ ಪ್ರೈ.ಲಿ.ನ ಪ್ರವರ್ತಕ ಭುವನೇಂದ್ರ ಕಿದಿಯೂರು ಅವರು, ಸಂಘಟಿತರಾಗಿ ಕೆಲಸ ಮಾಡಿದಾಗ ಯಾವುದೇ ಕ್ಲಿಷ್ಟಕರವಾದ ಕೆಲಸವನ್ನು ಸುಲಲಿತವಾಗಿ ನಿರ್ವಹಿಸಲು ಸಾಧ್ಯ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೆ. ರಂಜನ್ ಮಾತನಾಡಿ, ಗುರುವಿನ ಮಾರ್ಗದರ್ಶನ ವಿದ್ದರೆ ಎಷ್ಟು ಬೇಕಾದರೂ ಎತ್ತರಕ್ಕೆ ಬೆಳೆಯಬಹುದು. ಸಂಸ್ಥೆಯ ವತಿಯಿಂದ ಮುಂದಿನ ದಿನಗಳ್ಲಿ ಪೌರ ಕಾರ್ಮಿಕರ ನ್ನು ಗುರುತಿಸಿ ಸಮ್ಮಾನಿಸುವ ಮತ್ತು ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಉಪಾಧ್ಯಕ್ಷ ಗಣೇಶ್ ಬೈಲೂರು, ಕೋಶಾಧಿಕಾರಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ಉಪಸ್ಥಿತರಿದ್ದರು. ಸರ್.ಎಂ. ವಿಶ್ವೇಶ್ವರಯ್ಯ ಅವರ ಜೀವನಶೈಲಿ, ಕಾರ್ಯತತ್ಪರತೆ ಶ್ರಮ, ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಬಗ್ಗೆ ಎಂಜಿನಿಯರ್ ಸತೀಶ್ ಪೈ ಮಾತನಾಡಿದರು. ಸರ್.ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು. ಕಿರಣ್ ಕಾಮತ್, ಸತೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಸಾಧನೆಗೈದ ಸದಸ್ಯರ ಮಕ್ಕಳಾದ ಅದ್ವೈತ್ ಬೀಡು, ಶ್ರೇಯಸ್ ಬೇಕಲ್, ಸೀಜಲ್ ಅವರನ್ನು ಅಭಿನಂದಿಸಲಾಯಿತು. ಎಂಜಿನಿಯರ್ ಗಳಾದ ಭರತ್ ಭೂಷಣ್, ಗಣೇಶ್ ಸಾಲ್ಯಾನ್ ಪರಿಚಯಿಸಿದರು. ಸ್ವಾತಿ ಆಚಾರ್ಯ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಕುಮಾರ್ ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ಮನೋರಂಜನಾ ಕಾರ್ಯಕ್ರಮ ನೆಡೆಯಿತು , ವೃತ್ತಿ ನಿರತ ನೂರಾರು ಎಂಜಿನಿಯರ್ ಉಪಸ್ಥರಿದ್ದರು.