ಬಗೆಹರಿದ ಸೀಟು ಹಂಚಿಕೆ ಗೊಂದಲ: ಕಾಂಗ್ರೆಸ್ ಗೆ 20, ಜೆಡಿಎಸ್ ಗೆ 8, ಉಡುಪಿ-ಚಿಕ್ಕಮಗಳೂರು ಜೆಡಿಎಸ್ ವಶಕ್ಕೆ; ಕಣಕ್ಕಿಳಿಯುತ್ತಾರ ಜೆ.ಪಿ. ಹೆಗ್ಡೆ..?

ಉಡುಪಿ: ಲೋಕಸಭೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಭಾರೀ ಗೊಂದಲಕ್ಕೀಡಾಗಿದ್ದ
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಸೀಟು ಹಂಚಿಕೆ ವಿಚಾರ ಕೊನೆಗೂ ಬಗೆಹರಿದಿದೆ. ಕಾಂಗ್ರೆಸ್ ಹಾಲಿ ಸಂಸದರಿರುವ ತುಮಕೂರು ಕ್ಷೇತ್ರ ಸೇರಿದಂತೆ 8 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ.
ಉತ್ತರ ಕನ್ನಡ, ಉಡುಪಿ -ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ, ವಿಜಯಪುರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ.
ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಜೆಡಿಎಸ್ 8 ಕ್ಷೇತ್ರ ಹಾಗೂ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.
ಉಡುಪಿ-ಚಿಕ್ಕಮಗಳೂರು ಜೆಡಿಎಸ್ ವಶಕ್ಕೆ:
ಕಾಂಗ್ರೆಸ್ ಪ್ರಾಬಲ್ಯವಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ಪಾಲಾಗಿದೆ. ಆದರೆ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಯಾರು ಕಣಕ್ಕಿಯುತ್ತಾರೆ ಎಂಬುವುದು ಬಹಳಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಟಿಕೆಟ್ ಕೈತಪ್ಪಿದರೆ ಕೆ. ಜಯಪ್ರಕಾಶ್ ಹೆಗ್ಡೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇನ್ನೊಂದು ಮೂಲಗಳ ಪ್ರಕಾರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಹೆಗ್ಡೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಈ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿದಿತ್ತು ಎಂದು ಎನ್ನಲಾಗಿದೆ. ಆದರೆ ಈ ಎಲ್ಲ ಊಹಾಪೋಹಾಗಳಿಗೆ ನಾಳೆ ಮಧ್ಯಾಹ್ನದೊಳಗೆ ಅಂತಿಮ ತೆರೆ ಬೀಳಲಿದೆ.