ಉಡುಪಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸೀಟು ಹಂಚಿಕೆ ಒಪ್ಪಂದಂತೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ಗೆ ಪಾಲಾಗಿದೆ. ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ಯಾವುದೇ ಭಿನ್ನಮತವಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿ, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಹಾಲಿ ಸಂಸದೆ ಶೋಭಾ ಕೆರಂದ್ಲಾಜೆ ಸ್ಪರ್ಧೆಗೆ ಸ್ವಪಕ್ಷಿಯರಿಂದಲೇ ವಿರೋಧವಿದೆ. ಅವರು
ಕಳೆದ ಬಾರಿ ಗೆದ್ದ ನಂತರ ಅತಿಥಿ ಕಲಾವಿದರಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಪರಿಪೂರ್ಣ ಕಲಾವಿದರಾಗಿ ಬಂದಿದ್ದಾರೆ. ಯಾರದ್ದೋ ಹೆಸರಿನಲ್ಲಿ ಗೆಲುವು ಸಾಧಿಸುತ್ತೇನೆಂಬ ಭ್ರಮೆಯಲ್ಲಿದ್ದಾರೆ. ಅದು ಈ ಬಾರಿ ಕೈ ಗೂಡುವುದಿಲ್ಲ. ನಾವು ಮೈತ್ರಿ ಸರ್ಕಾರದ ಸಾಧನೆ ಹಾಗೂ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಜನಪರ ಯೋಜನೆಯನ್ನು ಜನಪರ ಮುಂದಿಟ್ಟು
ಮತಯಾಚಿಸುತ್ತೇವೆ ಎಂದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಯನ್ನು ದೂರ ಇಡುವ ಉದ್ದೇಶದಿಂದ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಇದರಲ್ಲಿ ನಮಗೆ ಯಶಸ್ಸು ಗಳಿಸುವ ವಿಶ್ವಾಸವಿದೆ. ಬಿಜೆಪಿ ಸೋಲಿನ ಭೀತಿಯಲ್ಲಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದೆ ಎಂದು ಟೀಕಿಸಿದರು.