ಉಡುಪಿ ಏ.5: ಉಡುಪಿ ಜಿಲ್ಲೆಗೆ ವಿದೇಶಗಳಿಂದ ಬಂದ ವ್ಯಕ್ತಿಗಳ 28 ದಿನಗಳ ಕ್ವಾರಂಟೈೈನ್ ಅವಧಿ ಇಂದಿಗೆ ಮುಕ್ತಾಯಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅವರು ಭಾನುವಾರ ಉಡುಪಿಯ ಶಾರದಾ ಮಂಟಪದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ 3 ಕೊರೋನ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪೀಡಿತರ ಸಂಪರ್ಕಕ್ಕೆ ಬಂದ ಎಲ್ಲಾ ವ್ಯಕ್ತಿಗಳನ್ನೂ ಕ್ವಾರಂಟೈನ್ ನಲ್ಲಿಡಲಾಗಿದ್ದು, ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ ಸಂಸದರು, ಕೊರೋನಾ ವಿರುದ್ದದ ಹೋರಾಟದಲ್ಲಿ ಜಿಲ್ಲಾಡಳಿತ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸಂಸದೆಯಾಗಿ ತಾನು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿನ ಬಡ ಜನತೆಗೆ ಉಚಿತವಾಗಿ 95 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಗುತ್ತಿದ್ದು, ಇನ್ನೂ ಹೆಚ್ಚಿನ ಅಗತ್ಯತೆ ಕಂಡುಬಂದಲ್ಲಿ ಪೂರೈಕೆ ಮಾಡಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇದೇ ಸಂದರ್ಭದಲ್ಲಿ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಉಡುಪಿ ನಗರಸಭೆಯ ಎಲ್ಲಾ ವಾರ್ಡ್ ಗಳಲ್ಲಿನ ಬಡ ಜನತೆಗೆ ಉಚಿತವಾಗಿ ವಿತರಿಸಲಾಗುವ 1001 ಆಹಾರದ ಕಿಟ್ಗಳ ಪೂರೈಕೆಗೆ ಸಂಸದರು ಚಾಲನೆ ನೀಡಿದರು.
ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಉಪಸ್ಥಿತರಿದ್ದರು.