ಉಡುಪಿ: ಅಧಿಕಾರ ಕಳೆದುಕೊಂಡ ಅನಂತರ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ಗೆ ಬ್ಲಾಕ್ ಮೇಲ್ ಮಾಡಿ ವಿಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಅವರಿಗೆ ಯಾವುದೇ ಹಿಡಿತ ಇಲ್ಲ ಎಂದು ಲೇವಡಿ ಮಾಡಿದರು.
ಪ್ರಸ್ತುತ ಕಾಂಗ್ರೆಸ್ನಲ್ಲಿ ಅನೇಕ ಬಣಗಳು ಹುಟ್ಟಿಕೊಂಡಿವೆ. ಸಿದ್ದರಾಮಯ್ಯ ಬಣ, ಜೆಡಿಎಸ್ ವಲಸಿಗರ ಬಣ, ಪರಮೇಶ್ವರ್ ಬಣ ಹಾಗೂ ಡಿ.ಕೆ. ಶಿವಕುಮಾರ್ ಬಣ ಹೀಗೆ ಹಲವು ಬಣಗಳು ಸೃಷ್ಟಿಯಾಗಿವೆ. ಇವುಗಳನ್ನು ನಿಭಾಯಿಸಲಾಗದೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಐದು ವರ್ಷ ಹೇಗೆ ನಡೆದುಕೊಂಡಿದ್ದಾರೆ ಎನ್ನುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಜಾತಿ, ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದರು. ಈಗಲೂ ಜಾತಿಗಳನ್ನು ಒಡೆದು ಅದರ ಲಾಭ ಪಡೆಯವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಕುತಂತ್ರ, ಷಡ್ಯಂತ್ರ ರಾಜ್ಯದ ಜನತೆಗೆ ಅರ್ಥವಾಗಿದೆ. ಈ ಬಾರಿ ಯಾರೂ ಸಿದ್ದರಾಮಯ್ಯ ಕುತಂತ್ರಕ್ಕೆ ಬಲಿಯಾಗಲ್ಲ ಎಂದರು.
ಡಿ.ಕೆ. ಶಿವಕುಮಾರ್ ಬಿಡುಗಡೆ ಉಪ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಡಿಕೆಶಿ ಇದ್ದಾಗಲೇ ವಿಧಾನಸಭಾ ಚುನಾವಣೆ ಆಗಿದೆ. ಅವರು ಮಂತ್ರಿಯಾಗಿದ್ದರೂ ವಿಧಾಸಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿತ್ತು. 104 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ಕನಕಪುರದಲ್ಲಿ ಡಿಕೆಶಿ ಪ್ರಭಾವ ಇರಬಹುದು. ಕನಕಪುರದಲ್ಲಿ ಗೆಲ್ಲುವುದು ನಮಗೆ ಇವತ್ತಿಗೂ ಕಷ್ಟ ಎಂಬುವುದು ಗೊತ್ತಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಡಿಕೆಶಿ ಪ್ರಭಾವ ಇಲ್ಲ. ರಾಜ್ಯದ ಜನತೆಗೆ ಡಿಕೆಶಿ ಏನು ಎಂಬುವುದು ಅರ್ಥವಾಗಿದೆ ಎಂದು ಹೇಳಿದರು.
ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, ಏಕಾಂಗಿಯಾಗಿಯೇ ಉಪ ಚುನಾವಣೆ ಗೆಲ್ಲಲಿದೆ. ಮೂರುವರೆ ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಜೆಡಿಎಸ್ನವರು ಯಾರು ಕೂಡ ನಮ್ಮ ಸಂಪರ್ಕದಲ್ಲಿ ಇಲ್ಲ. ಯಾವುದೇ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಬೇಕಾದರೆ
ಮೊದಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೊದಲಿನಿಂದಲೂ ನಮ್ಮದು ಇದೇ ನಿಲುವು ಆಗಿದೆ ಎಂದರು.