ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ತಡೆಗೆ 29 ಚೆಕ್‌ಪೋಸ್ಟ್‌ಗಳು; ವಾಹನಗಳ ಪರಿಶೀಲನೆ, ರೂ.3,08,710 ದಂಡ.

ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ತಡೆಗಟ್ಟುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಒಟ್ಟು 29 ಚೆಕ್‌ಪೋಸ್ಟ್‌ಗಳನ್ನು ಕಾರ್ಯಾಚರಣೆಗೆ ಇಡಲಾಗಿದೆ. ಹಗಲು–ರಾತ್ರಿ ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, ಮರಳು, ಕೆಂಪುಕಲ್ಲು, ಶಿಲೆಕಲ್ಲು ಹಾಗೂ ಎಂ–ಸ್ಯಾಂಡ್‌ ಸಾಗಾಟ ನಡೆಸುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ.

ದಿನಾಂಕ 06-12-2025ರಿಂದ ಇದುವರೆಗೆ 3,966 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಸರ್ಕಾರಕ್ಕೆ ರಾಯಧನ ಪಾವತಿಸದೇ ಹಾಗೂ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ನಡೆಸುತ್ತಿದ್ದ 11 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಒಂದು ವಾಹನವನ್ನು ಜಪ್ತಿ ಮಾಡಿ, ಅದರ ಚಾಲಕ ಹಾಗೂ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳಿದ 10 ವಾಹನಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು, ಮುಂದಿನ ಕ್ರಮಕ್ಕಾಗಿ ಉಡುಪಿ ಗಣಿ ಇಲಾಖೆಗೆ ವರದಿ ಕಳುಹಿಸಲಾಗಿದೆ. ಗಣಿ ಇಲಾಖೆಯವರು ಈ ಸಂಬಂಧ ವಾಹನಗಳ ಆರ್‌ಸಿ ಮಾಲಿಕರಿಗೆ ಒಟ್ಟು ರೂ. 3,08,710 ದಂಡ ವಿಧಿಸಿದ್ದಾರೆ.

ಮುಂದೆಯೂ ಸರ್ಕಾರಕ್ಕೆ ರಾಯಧನ ಪಾವತಿಸದೇ ಹಾಗೂ ಪರವಾನಿಗೆ ಇಲ್ಲದೆ ನಡೆಯುವ ಮರಳು ಹಾಗೂ ಖನಿಜ ಸಾಗಾಟದ ವಿರುದ್ಧ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.