ಮುರ್ಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಮಾರ್ಗದಲ್ಲಿ ಬದಲಾವಣೆ

ಉಡುಪಿ: ನೈರುತ್ಯ ರೈಲ್ವೇ ವತಿಯಿಂದ ಕೆ.ಎಸ್.ಆರ್. ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ KSR Bengaluru Railway Station ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಿನ್ನೆಲೆ, ಮುರ್ಡೇಶ್ವರ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 16586 ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಕೊಂಕಣ್ ರೈಲ್ವೇ Konkan Railway ಪ್ರಕಟಣೆ ತಿಳಿಸಿದೆ.

ಮುಂದಿನ ಜುಲೈ 16 ಮತ್ತು 17ರಂದು ಸಂಚರಿಸುವ ಮುರ್ಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕೆ.ಎಸ್.ಆರ್. ಬೆಂಗಳೂರು, ಯಶವಂತಪುರ, ಹೆಬ್ಬಾಳ ಹಾಗೂ ಬಾಣಸವಾಡಿ ಮೂಲಕ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಇರುವುದಿಲ್ಲ.

ಅದೇ ರೀತಿ ಜುಲೈ 31ರಿಂದ ಆಗಸ್ಟ್ 2ರವರೆಗೆ ಮೂರು ದಿನ ಸಂಚರಿಸುವ ಮುರ್ಡೇಶ್ವರ-ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ರೈಲು ಹಾಸನ್ ಜಂಕ್ಷನ್, ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ ಎ ಕ್ಯಾಬಿನ್‌, ಲೊಟ್ಟೇಗೊಲ್ಲನಹಳ್ಳಿ, ಬಾಣಸವಾಡಿ ಮೂಲಕ ಸಂಚರಿಸಿ ಕೊನೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಈ ಅವಧಿಯಲ್ಲಿ ಹೊಳೇನರಸೀಪುರ, ಕೃಷ್ಣರಾಜಸಾಗರ, ಮೈಸೂರು ಜಂಕ್ಷನ್, ಮಂಡ್ಯ, ರಾಮನಗರ, ಕೆ.ಎಸ್.ಆರ್. ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.