ಉಡುಪಿ:ಕರಾವಳಿಯಲ್ಲಿ ಬಹುವೈಶಿಷ್ಟ್ಯತೆಯಿಂದ ಮರಾಠಿ, ಕುಡುಬಿ ಹಾಗೂ ಖಾರ್ವಿ ಸಮುದಾಯಗಳು ಆಚರಿಸುವ ಹೋಳಿ ಕುಣಿತವನ್ನು ಉಡುಪಿ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹೋಳಿ ಕುಣಿತದಲ್ಲಿ ವಿಶೇಷ ಆಕರ್ಷಣೆಯಾಗಿ ಹಕ್ಕಿಯ ಬಾಲದ ಗರಿ, ಸುರಗಿ ಸುರ ಸಂಪಿಗೆ ಹೂವು, ಅಬ್ಬಲಿ ಮಾಲೆಯ ಹೂವು, ವೇಷಭೂಷಣ, ಹೂವಿನಿಂದ ಅಲಂಕೃತ ಪೇಟವನ್ನು ತೊಟ್ಟು ಸಾಂಪ್ರದಾಯಿಕ ಕುಣಿದೊಂದಿಗೆ ಸಂಭ್ರಮಿಸಿದರು.
ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಸಿ. ನಾಯ್ಕ್ ಅವರ ನೇತೃತ್ವದಲ್ಲಿ ಸಂಘದ ಪ್ರಧಾನ ಕಚೇರಿ ಸಹಕಾರಿ ಕ್ಷೇತ್ರದಲ್ಲೂ ಹೋಳಿ ಹಬ್ಬದ ಆಚರಣೆ ಮಾಡಿರುವುದು ಅತ್ಯಂತ ವಿಶೇಷವಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ಮರಾಠಿ 136 ಕೂಡುವಳಿಗಳು (ಹತ್ತು ಸಮಸ್ತರ ಕಟ್ಟೆಗಳು)ವಿದ್ದು, ಎಲ್ಲವೂ ಹೋಳಿ ಆಚರಿಸುತ್ತವೆ. ಹೋಳಿ ಆಚರಣೆ ಸಮಾಜದ ಅಸ್ಮಿತೆಯಾಗಿದೆ. ಈ ಆಚರಣೆ, ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶವೂ ಕೂಡುವಳಿಗಿದೆ.
ಹೋಳಿ ಆಚರಣೆ:
ಕೂಡುವಳಿಯ ಯಜಮಾನನ ಮನೆಯಲ್ಲಿ ದಶಮಿ, ಏಕಾದಶಿಯಂದು ತುಳಸಿ ಕಟ್ಟೆಯಲ್ಲಿ ತೆಂಗಿನಕಾಯಿ ಇಟ್ಟು ಕುಣಿತಕ್ಕೆ ಬಳಸುವ ವಸ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಐದು ದಿನಗಳ ಕಾಲ ಊರಿನ ವಿವಿಧ ಮನೆಗಳಿಗೆ, ಧಾರ್ಮಿಕ ಸ್ಥಳಗಳಿಗೆ ತೆರಳಿ ಹೋಳಿ ಕುಣಿದು ತಳಿ ಕಾಣಿಕೆ ಪಡೆಯುವುದು ವಾಡಿಕೆ. ಹುಣ್ಣಿಮೆಯಂದು ಎಲ್ಲರೂ ಸೇರಿ ಸಂಭ್ರಮಿಸಿ ತುಳಸಿಕಟ್ಟೆಯಲ್ಲಿದ್ದ ಫಲವನ್ನು ಅವರೋಹಣ ಮಾಡಿದ ಅನಂತರ ಹತ್ತಿರದ ಕೆರೆ/ಹೊಳೆಯಲ್ಲಿ ಸ್ನಾನ ಮುಗಿಸಿ ಹಿಂತಿರುಗುವಾಗ ಕಾಮದಹನದ ಪ್ರತೀಕವೆಂಬಂತೆ ಹುಲ್ಲಿಗೆ ಬೆಂಕಿ ಹಾಕಿ ಅದನ್ನು ದಾಟಿ ಬರುವುದು ಸಂಪ್ರದಾಯ. ಆ ಬಳಿಕ ಎಲ್ಲರೂ ಸೇರಿ ಸಾಮೂಹಿಕ ಭೋಜನ ಸ್ವೀಕರಿಸುತ್ತಾರೆ.
ಆದಿ ಭಸ್ಮಮೇಶ್ವರಿ ಮರಾಠಿ ಸೇವಾ ಸಂಘ ಪೇರ್ಣ oಕಿಲ ಇದರ ಹತ್ತು ಸಮಸ್ತ ತಂಡದಿಂದ ನಡೆಸಿಕೊಟ್ಟರು.
ಸಹಕಾರಿ ಕ್ಷೇತ್ರದಲ್ಲಿ ಕೇವಲ ಆರ್ಥಿಕ ವಹಿವಾಟಿಗಷ್ಟೇ ಸೀಮಿತಗೊಳಿಸದೇ ಸಮುದಾಯದ ಸಾಂಪ್ರದಾಯಿಕ ಹಬ್ಬದ ಆಚರಣೆಗೆ ಅವಕಾಶವನ್ನು ಕಲ್ಪಿಸಿದ್ದೇವೆ. ಜತೆಗೆ ಶಿವಾಜಿ ಮಹಾರಾಜ್ ಜಯಂತಿಯನ್ನು ಕೂಡಾ ಸಂಘದಲ್ಲಿ ಆಚರಿಸಲಾಗುತ್ತಿದೆ ಎಂದು ಅಧ್ಯಕ್ಷ ದಿನೇಶ್ ಸಿ. ನಾಯ್ಕ್ ತಿಳಿಸಿದ್ದಾರೆ.
ಸಂಘದ ಮುಖ್ಯಕಾರ್ಯನಿರ್ವಾಹಣಧಿಕಾರಿ ಪ್ರಶಾಂತ್ ಶಿರೂರು, ಉಪಾಧ್ಯಕ್ಷರಾದ ಗಣೇಶ್, ನಿರ್ದೇಶಕರಾದ ಆರ್ ಸಿ ನಾಯ್ಕ್, ಲಕ್ಷ್ಮಣ ನಾಯ್ಕ್, ರಘುನಾಥ್ ನಾಯ್ಕ್, ಕೃಷ್ಣ ನಾಯ್ಕ್, ಕರುಣಾಕರ ಕಾಂಚನ್, ಸತೀಶ್ ನಾಯ್ಕ್,ಹರೀಶ್ ನಾಯ್ಕ್, ಶೇಖರ್ ಶೆಟ್ಟಿ, ಶ್ರೀಮತಿ ಜ್ಯೋತಿ ಎಮ್ ಶೆಟ್ಟಿ, ಶ್ರೀಮತಿ ಶೋಭಾ ಹಾಗೂ ಸಿಬ್ಬಂದಿಗಳು ಹಾಗೂ ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು.
















