ಅಧಿಕಾರ ವಿಕೇಂದ್ರೀಕರಣದಿಂದ ಸರಕಾರದ ಸೌಲಭ್ಯ ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ: ಜೆರಾಲ್ಡ್ ಐಸಾಕ್

ಉಡುಪಿ: ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾ.ಪಂ. ಸದಸ್ಯರಿಗೆ ಅಧಿಕಾರ ಮತ್ತು‌ ಸೇವೆ ನೀಡುವ ವಿಶೇಷ ವ್ಯವಸ್ಥೆ ಇರುವುದರಿಂದ ಸರ್ಕಾರದ ಸವಲತ್ತುಗಳನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿದರು.
ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ವತಿಯಿಂದ ಶೋಕ ಮಾತಾ ಇಗರ್ಜಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೆಥೊಲಿಕ್‌ ಜನಪ್ರತಿನಿಧಿಗಳ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯ 112 ಕ್ರೈಸ್ತ ಜನಪ್ರತಿನಿಧಿಗಳು ಆಯ್ಕೆಯಾಗಿದ್ದು, ತಮ್ಮ ನಿಸ್ವಾರ್ಥ ಸೇವೆಯನ್ನು‌ ತಮ್ಮ ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀಡುತ್ತಿದ್ದಾರೆ. ಅದರಂತೆ ಮುಂದಿನ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಲು ಪ್ರಯತ್ನ ನಡೆಸಬೇಕು ಎಂದರು.
ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ಪಂಚಾಯತ್‌ ರಾಜ್‌ ರಾಜ್ಯ ಸಂಚಾಲಕ ವಿಲ್‌ಫ್ರೆಡ್‌ ಡಿಸೋಜಾ, ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ನ ಆಧ್ಯಾತ್ಮಿಕ ನಿರ್ದೇಶಕ
ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಉಡುಪಿ ಜಿಲ್ಲಾ ಪಂಚಾಯ್ತಿ ಸದಸ್ಯ ವಿಲ್ಸನ್‌ ರೊಡ್ರಿಗಸ್‌, ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ನ ನಿಕಟಪೂರ್ವ ಅಧ್ಯಕ್ಷ ವಲೇರಿಯನ್‌ ಆರ್‌ ಫರ್ನಾಂಡಿಸ್‌ ಉಪಸ್ಥಿತರಿದ್ದರು. ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ ಪ್ರಾಸ್ತಾವನೆಗೈದರು.
ಉಪಚುನಾವಣೆಯಲ್ಲಿ ಗೆದ್ದ ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಶಾಂತಿ ಪಿರೇರಾ, ವೆರೋನಿಕಾ ಡಿಸೋಜಾ, ಪ್ರೆಸಿಲ್ಲಾ ಮಿನೇಜಸ್‌, ವಿನೋದ್‌ ಜೊಯೆಲ್‌ ಮಥಾಯ್ಸ್‌, ವಿಲ್ಮಾ ಮೆಂಡೊನ್ಸಾ, ಸುನಿಲ್‌ ಕಾಬ್ರಾಲ್‌ ಅವರನ್ನು ಗೌರವಿಸಲಾಯಿತು.
ಮೇರಿ ಡಿಸೋಜಾ ಸ್ವಾಗತಿಸಿ, ಕೆಥೊಲಿಕ್‌ ಸಭಾ ಕಾರ್ಯದರ್ಶಿ ಸಂತೋಷ್‌ ಕರ್ನೆಲಿಯೋ ವಂದಿಸಿದರು. ಫ್ಲೈವನ್‌ ಕಾರ್ಯಕ್ರಮ ನಿರೂಪಿಸಿದರು.