ಮಾನವೀಯ ಮೌಲ್ಯಗಳ ಮೂಲಕ ಸೌಹಾರ್ದತೆ ನಿರ್ಮಿಸಲು ಪ್ರಯತ್ನಿಸಬೇಕು: ಫರ್ಡಿನಾಂಡ್ ಗೋನ್ಸಾಲ್ವಿಸ್

ಉಡುಪಿ: ಪ್ರತಿಯೊಬ್ಬರು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸೌಹಾರ್ದ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ನ ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಹೇಳಿದರು.
ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ವತಿಯಿಂದ 2020ರ ಜನವರಿ 19ರಂದು ಕಲ್ಯಾಣಪುರ ಮೌಂಟ್‌ ರೋಸರಿ ಚರ್ಚ್‌ನ ಆವರಣದಲ್ಲಿ ಆಯೋಜಿಸಿರುವ ಧರ್ಮಪ್ರಾಂತ್ಯ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್‌–2020’ದ ಸ್ಟಿಕ್ಕರ್‌ ಮತ್ತು ಪೋಸ್ಟರ್‌ಅನ್ನು ಗುರುವಾರ ಅನಾವರಣಗೊಳಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ನಾಗರಾಜ್‌ ರಾವ್‌ ಮಾತನಾಡಿ, ಕ್ರೈಸ್ತ ಸಮುದಾಯ ಸೇವೆಯ ಮೂಲಕ ತನ್ನ ಛಾಪನ್ನು ದೇಶದ ಉದ್ದಗಲಕ್ಕೂ ಪಸರಿಸಿದೆ ಎಂದರು. ಉದ್ಯಮಿ ಗೌತಮ್‌ ನಾವಡ ಮಾತನಾಡಿ, ಸಮುದಾಯಗಳನ್ನು ಒಗ್ಗೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರತಿಯೊಂದು ಸಮಾಜದವರು ತಮ್ಮ ಮಧ್ಯೆ ಕೇವಲ ಗೋಡೆಗಳನ್ನು ಕಟ್ಟುವ ಕೆಲಸಗಳನ್ನು ಮಾಡದೆ, ಸೌಹಾರ್ದ ಸಮಾಜ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಉದ್ಯಮಿ ಮೊಹಮ್ಮದ್‌ ಮೌಲಾ ಹೇಳಿದರು.
ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌, ಕಾರ್ಯದರ್ಶಿ ಸಂತೋಷ್‌ ಕರ್ನೆಲಿಯೋ, ಸಮ್ಮೇಳನದ ಸಂಚಾಲಕ ಎಲ್‌ ರೋಯ್‌ ಕಿರಣ್‌ ಕ್ರಾಸ್ತಾ, ನಿಕಟಪೂರ್ವ ಅಧ್ಯಕ್ಷ ವಲೇರಿಯನ್‌ ಫರ್ನಾಂಡಿಸ್‌, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್‌ ಡಿಕೋಸ್ತಾ, ವಾಲ್ಟರ್‌ ಸಿರಿಲ್‌ ಪಿಂಟೊ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜಾ ವಂದಿಸಿದರು.