ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 26 ನೇ ವಾರ್ಷಿಕ ಮಹಾಸಭೆ: ಶೇ 20 ಡಿವಿಡೆಂಡ್ ಘೋಷಣೆ

ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 26 ನೇ ವಾರ್ಷಿಕ ಮಹಾಸಭೆಯು ಸೆ. 10ರಂದು ಉದುಪಿ ಶೋಕಮಾತಾ ಇಗರ್ಜಿಯ ಆವೆ ಮರಿಯಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ’ ಅಲ್ಮೇಡಾ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘವು 2022-23 ಸಾಲಿನಲ್ಲಿ 83.81 ಲಕ್ಷ ಲಾಭಾಂಶವನ್ನು ಗಳಿಸಿದ್ದು, ಪಾಲುದಾರರಿಗೆ ಶೇ. 20 ಡಿವಿಡೆಂಡ್ ಅನ್ನು ಘೋಷಿಸಲಾಯಿತು.

ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ವಂದನೀಯ ರೋಯ್ ಲೋಬೋ , ಸಂಘದ ಸಾಧನೆಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನೀಡಿದ ಸಾಧನಾ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಹಸ್ತಾಂತರಿಸಿ ಅಭಿನಂದಿಸಿದರು.

ಲಯನ್ಸ್ ಕ್ಲಬ್ 317c ಜಿಲ್ಲಾ ಗವರ್ನರ್ ಹುದ್ದೆಯನ್ನು ಅಲಂಕರಿಸಿದ ಸಂಘದ ನಿರ್ದೇಶಕರಲ್ಲಿ ಒಬ್ಬರಾದ ಡಾ. ನೇರಿ ಕರ್ನೆಲಿಯೋ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಹತ್ತನೇ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿರುವ “ಅ” ವರ್ಗದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಮಾನಸ ನಿರ್ಮಿತಿ ಮತ್ತು ಪುನರ್ವಸತಿ ಕೇಂದ್ರ ಪಾಂಬೂರು ಇವರಿಗೆ ಸಹಾಯಧನ ವಿತರಿಸಲಾಯಿತು.

ಉಪಾಧ್ಯಕ್ಷ ಲೂವಿಸ್ ಲೋಬೋ ಸಂಘದ ಮುಂದಿನ ಕಾರ್ಯ ಯೋಜನೆಗಳ ಮಾಹಿತಿ ನೀಡಿದರು. ಕಾರ್ಯದರ್ಶಿ ಸಂದೀಪ್ ಫೆರ್ನಾಂಡೀಸ್ ವಾರ್ಷಿಕ ವರದಿ ಮಂಡಿಸಿದರು.

ನಿರ್ದೇಶಕರಾದ ಇಗ್ನೇಷಿಯಸ್ ಮೋನಿಸ್, ಪರ್ಸಿ ಜೆ ಡಿಸೋಜಾ, ಜೇಮ್ಸ್ ಡಿ ಸೋಜಾ, ಆರ್ಚಿ ಬಾಲ್ದ್ ಎಸ್ ಡಿ’ಸೋಜಾ, ಫ್ರಾಂಕ್ಲಿನ್ ಮಿನೇಜಸ್, ಜೆಸಿಂತಾ ಡಿ’ಸೋಜಾ, ಗಿಲ್ಬರ್ಟ್ ಫೆರ್ನಾಂಡಿಸ್, ಲೋಯ್ಸೆಟ್ ಜೆ ಕರ್ನೆಲಿಯೋ, ಶಾಖಾ ವ್ಯವಸ್ಥಾಪಕಿ ನೈನಾ ಮಿನೇಜಸ್, ಸುನಿಲ್ ಡಿ’ಸೋಜಾ, ಜೆನೆಟ್ ಡಿ’ಸೋಜಾ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಶಿರ್ವ ಶಾಖಾ ವ್ಯವಸ್ಥಾಪಕಿ ಸೀತಲ್ ಮರಿಯಾ ಡಿ’ಸೋಜಾ ನಿರೂಪಿಸಿದರು.