ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಕುಂಜಾಲಿನಲ್ಲಿ ಗೋವಿನ ತಲೆ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ತನಿಖೆಗಾಗಿ ಪೊಲೀಸರ 4 ತಂಡ ರಚಿಸಿದ್ದೇವೆ ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹದ ಅವಶ್ಯಕತೆಯಿಲ್ಲ, ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಸಿಸಿಟಿವಿ ಫೂಟೇಜ್, ತಾಂತ್ರಿಕ ಮಾಹಿತಿಗಳನ್ನು ಕಲೆಹಾಕುತ್ತಿದ್ದೇವೆ, ಎರಡು ಮೂರು ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದರು.
ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿ ಟೈಂಲೈನ್, ಡೆಡ್ ಲೈನ್ ಕೊಟ್ಟರೆ ಕಷ್ಟ ಆಗುತ್ತದೆ. ಇದನ್ನು ಕೊಲೆ ಪ್ರಕರಣದಷ್ಟೇ ಗಂಭೀರವಾಗಿ ಪರಿಗಣಿಸಿದ್ದೇವೆ.
ಮೊನ್ನೆ ರಾತ್ರಿ 11.30ರ ಸುಮಾರಿಗೆ ಈ ಘಟನೆ ಆಗಿದೆ. ಹಸುವಿನ ತಲೆ ಮತ್ತಿತರ ಭಾಗಗಳು ಪತ್ತೆಯಾಗಿವೆ. ಮಹಜರು ಮಾಡಿ, ಎಫ್ ಐಆರ್ ದಾಖಲಿಸಿದ್ದೇವೆ. ಪಂಚಾಯತ್ಗೆ ದೇಹದ ಭಾಗಗಳ ವಿಲೇವಾರಿಗೆ ಸೂಚಿಸಿದ್ದೇವೆ. ಕರಾವಳಿಯ ಕೋಮು ಸೌಹಾರ್ದ ಕೆಡಿಸಲು ದುಷ್ಕರ್ಮಿಗಳು ಪ್ರಯತ್ನಿಸಿರಬಹುದು. ಅಕ್ರಮ ಗೋವು ಸಾಗಾಟಕ್ಕೆ ಯತ್ನ ನಡೆದಿರಬಹುದು. ಎಲ್ಲಾ ಆಯಾಮಗಳಲ್ಲೂ ಕೂಡ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹೇಳಿದ್ದಾರೆ.












