ಉಡುಪಿ:ಸಂಗೀತದಿಂದ ಆರೋಗ್ಯವಂತ ಸಮಾಜ ನಿರ್ಮಾಣ : ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ

ಉಡುಪಿ: ಸಂಗೀತವು ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಗುರುವಾರ ಕುಂದಾಪುರದ ಭಂಡಾರ್‌ಕರ‍್ಸ್ ಕಾಲೇಜಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಂಡಾರ್‌ಕರ‍್ಸ್ ಕಾಲೇಜು ಐ.ಕ್ಯೂ.ಎ.ಸಿ ವಿಭಾಗದ ಸಹಯೋಗದಿಂದ ನಡೆದ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ “ಹಾಡಿರೇ ರಾಗಗಳ ತೂಗಿರೇ ದೀಪಗಳ” ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ದೇಶಿಯ ಕಲೆ ಉಳಿವಿಗೆ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಸಂಗೀತ ಪ್ರಕಾರಗಳಿದ್ದು, ಇಂತಹ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರೋತ್ಸಾಹ ನೀಡಿ ವೇದಿಕೆಯನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಸಂಗೀತ, ನೃತ್ಯ, ಯಕ್ಷಗಾನದಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ತಮ್ಮ ಶೈಕ್ಷಣಿಕ ವಿಷಯದಲ್ಲೂ ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಂಡಾರ್‌ಕರ‍್ಸ್ ಕಾಲೇಜು ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಶಾಂತರಾಮ ಪ್ರಭು ಮಾತನಾಡಿ, ಸಂಗೀತ ಕಲೆಯು ಸಮಸ್ತ ಜೀವ ರಾಶಿಯನ್ನು ತನ್ನತ್ತ ಸೆಳೆಯುವುದರ ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಮಾತನಾಡಿ, ಭಾರತದಲ್ಲಿ ಸಂಗೀತ ಉನ್ನತ ಮಟ್ಟದಲ್ಲಿದ್ದು, ಪ್ರಪಂಚದ ಎಲ್ಲಾ ಸಂಗೀತಕ್ಕಿಂತಲೂ ಭಾರತದ ಸಂಗೀತಕ್ಕೆ ಮೌಲ್ಯ ಹೆಚ್ಚು ಎಂದ ಅವರು, ಹೆಚ್ಚಿನ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮೊದಲಿನಿಂದಲೂ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕ ಸತ್ಯನಾರಾಯಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಮ್. ಗೊಂಡ, ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸರೋಜ ಮತ್ತು ತಂಡದಿಂದ ಪಾಡ್ದನದ ಹಾಡುಗಳು, ಸ್ವಪ್ನರಾಜ್ ಹಾಗೂ ತಂಡದಿಂದ ಹಿಂದೂಸ್ತಾನಿ ಗಾಯನ, ಜಯಲಕ್ಷ್ಮಿ ಮತ್ತು ತಂಡದಿಂದ ಸೋಬಾನೆ ಪದಗಳು, ನವೀನ್ ಕೋಟ ಮತ್ತು ತಂಡದಿಂದ ಯಕ್ಷಗಾನ ಪದಗಳು, ರಮೇಶ್.ಬಿ ನಿಟ್ಟೆ ಮತ್ತು ತಂಡದಿಂದ ಸುಗಮ ಸಂಗೀತ, ಸುಬ್ಬಣ್ಣ ಕೋಣಿ ಮತ್ತು ತಂಡದಿಂದ ಜನಪದ ಗೀತೆಗಳು, ವಸಂತಿ ಕಡಂಬಳ ಮತ್ತು ತಂಡದಿಂದ ದಾಸರ ಪದಗಳು, ಶಂಕರ್‌ದಾಸ್ ಚಂಡ್ಕಳ ಮತ್ತು ತಂಡದಿಂದ ರಂಗ ಗೀತೆಗಳು ಹಾಗೂ ರಮೇಶ್ ಮಹಾಂತ ಮತ್ತು ತಂಡದಿಂದ ವಚನ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ ವಂದಿಸಿದರು.