ಉಡುಪಿ: ಭ್ರಷ್ಟಾಚಾರ ಎನ್ನುವುದು ಇಂದು ಸಮಾಜದಲ್ಲಿ ಕ್ಯಾನ್ಸರ್‌ನಂತೆ ಹರಡಿಕೊಂಡಿದ್ದು, ಅದನ್ನು ತಳಮಟ್ಟದಿಂದಲೇ ಮಟ್ಟಹಾಕುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕಾರ್ಯಪ್ರವೃತ್ತವಾಗಬೇಕು ಎಂದು ಲೋಕಾಯುಕ್ತ ನ್ಯಾಯಾಧೀಶ ಪಿ. ವಿಶ್ವನಾಥ ಶೆಟ್ಟಿ ಹೇಳಿದರು.
ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನೂತನ ಗ್ರಂಥಾಲಯ ‘ಜ್ಞಾನ ಸಿಂಧು’ ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ವಕೀಲ ವೃತ್ತಿ ಸಮಾಜದಲ್ಲಿ ಬಹಳ ಪ್ರಭಾವ ಬೀರುವ ವೃತ್ತಿಯಾಗಿದೆ. ಬಡವರು, ಕಾರ್ಮಿಕರಿಂದ ಹಿಡಿದು ಅಧಿಕಾರಿಗಳು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳವರೆಗೆ ಎಲ್ಲರೂ ಕೂಡ ವಕೀಲರ ಕಕ್ಷಿದಾರರಾಗಿ ಬರುತ್ತಾರೆ. ವೃತ್ತಿಯಲ್ಲಿ ಆಸಕ್ತಿ ಹಾಗೂ
ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಉತ್ತಮ ವಕೀಲರಾಗಿ ಗೌರವ ಸಂಪಾದಿಸಬಹುದು ಎಂದರು.
ಜ್ಞಾನ ಎಂಬುದು ಬಹಳ ದೊಡ್ಡ ಶಕ್ತಿ ಮತ್ತು ಬಲ. ಬೇರೆ ಎಲ್ಲ ರೀತಿಯ ಸಂಪತ್ತಿಗಿಂತ ಜ್ಞಾನ ಸಂಪತ್ತೇ ಬಹಳ ಮೌಲ್ಯಯುತವಾದ ಆಸ್ತಿಯಾಗಿದೆ. ಈ ಜ್ಞಾನ ಸಂಪತ್ತನ್ನು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಪಡೆದುಕೊಳ್ಳಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಕಾಲೇಜು ಅಥವಾ ಸಾರ್ವಜನಿಕ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ
ನೀಡಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಗಳು ಸ್ಮಾರಕಗಳಾಗುತ್ತಿವೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯಗಳ ಕಡೆಗೆ ಸುಳಿಯುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ತಮ್ಮ ಜ್ಞಾನ ಕೌಶಲ ವೃದ್ಧಿಸುವ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಜಿಲ್ಲೆಯ ಕೆಲವೊಂದು ಗ್ರಾಪಂ ಹಾಗೂ ಗ್ರಾಮ ಲೆಕ್ಕಿಗಾರ ಸ್ತರದಲ್ಲಿ ಕೆಲ ಲೋಪ ದೋಷಗಳಿದ್ದು, ಅದನ್ನು ಶೀಘ್ರವೇ ಸರಿಪಡಿಸಿಕೊಂಡು ಜಿಲ್ಲೆಯಲ್ಲಿ ಅತ್ಯುತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇವೆ. ಉಡುಪಿಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಮಣಿಪಾಲ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಮಧು ರಾಘವನ್, ಮಣಿಪಾಲ ಡಾ.ಟಿಎಂಎ ಪೈ ಫೌಂಡೇಶನ್ ಕೋಶಾಧಿಕಾರಿ ಟಿ. ಅಶೋಕ್ ಪೈ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ ಸ್ವಾಗತಿಸಿದರು. ಶ್ರೀಲಕ್ಷ್ಮೀ ಕಾಮತ್ ವಂದಿಸಿದರು.
ನಾಗರಿಕ ಸೇವೆ: ಉಡುಪಿ ಜಿಲ್ಲೆ ಪ್ರಥಮ
ಉಡುಪಿ ಜಿಲ್ಲೆಯಲ್ಲಿ ನಾಗರಿಕ ಸೇವಾ ಕೇಂದ್ರಗಳ ಮೂಲಕ ಜನರಿಗೆ 70 ಸೇವೆಗಳನ್ನು ನೀಡುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿಯೇ ಉಡುಪಿ ಪ್ರಥಮ ಸ್ಥಾನದಲ್ಲಿದೆ.
ಇತ್ತೀಚೆಗೆ 10 ಕಂದಾಯ ಸೇವೆಗಳನ್ನು ಆರಂಭಿಸಲಾಗಿದ್ದು, ಅದರಲ್ಲಿಯೂ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಸಕಾಲದಲ್ಲಿ 250 ಸೇವೆಗಳನ್ನು ನೀಡಲಾಗುತ್ತಿದ್ದು, ಸದ್ಯ ಮೂರನೇ ಸ್ಥಾನದಲ್ಲಿದೆ. ಈ ತಿಂಗಳ ಅಂತ್ಯದೊಳಗೆ ಪ್ರಥಮ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತೇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.