ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಿ: ಸಚಿವ ಬೊಮ್ಮಾಯಿ

ಉಡುಪಿ,: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಲಭ್ಯವಿರುವ ಸಂಪನ್ಮೂಲಗಳ ಸಮರ್ಪಕ ಬಳಕೆ ಆಗಬೇಕು. ಈ ನಿಟ್ಟಿನಲ್ಲಿ ಉಡುಪಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಉಡುಪಿ ಜಿಲ್ಲಾ ಟೂರಿಸಂ ಟಾಸ್ಕ್ ಫೋರ್ಸ್‍ನ್ನು ರಚನೆ ಮಾಡುವ ನಿರ್ಣಯವನ್ನು ಶುಕ್ರವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೈಗೊಳ್ಳಲಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡುತ್ತಾ, ಜಿಲ್ಲೆಗೆ ಒಂದು ವಿಶೇಷವಾದ ಟೂರಿಸಂ ವೀವ್ ನೀಡಬೇಕು ಎನ್ನುವ ದೃಷ್ಟಿಕೋನದಿಂದ ಜಿಲ್ಲಾ ಟೂರಿಸಂ ಟಾಸ್ಕ್ ಫೋರ್ಸ್‍ನ್ನು ರಚನೆ ಮಾಡಲಾಗುತ್ತಿದ್ದು, ಈ ಟಾಸ್ಕ್ ಫೋರ್ಸ್ ಪ್ರವಾಸೋದ್ಯಮ ಕ್ಷೇತ್ರದ ತಜ್ಞರು, ಉದ್ಯಮಿಗಳು, ಹೋಡಿಕೆದಾರರು, ಅಧಿಕಾರಿಗಳು, ಸ್ಥಳೀಯ ತಜ್ಞರನ್ನು ಒಳಗೊಂಡಿರುತ್ತದೆ. ಎಲ್ಲಾ ತಾಲೂಕುಗಳ ಪ್ರವಾಸಿ ತಾಣಗಳ ಟೂರಿಸಂನ ವಿಶನ್ ಡಾಕ್ಯೂಮೆಂಟ್‍ನ್ನು ತಯಾರಿಸಲು ನುರಿತರನ್ನು ನೇಮಿಸಲಾಗುತ್ತದೆ ಎಂದರು.

ಆಧಾರ್ ಕಾರ್ಡ್ ವಿತರಣೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಕೇಂದ್ರಗಳ ನಿರ್ಮಾಣ ಹಾಗೂ ಸಾಫ್ಟ್‍ವೇರ್‍ಗಳನ್ನು ಅಪ್‍ಡೇಟ್ ಮಾಡಿ, ಸೂಕ್ತ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಸಮಸ್ಯೆ ನಿವಾರಣೆಗೆ ಕರ್ನಾಟಕ ಸರಕಾರದಿಂದ ವಿಶೇಷ ಅನುದಾನ ಪಡೆಯಲು ಪೈಲೆಟ್ ಪ್ರೋಜೆಕ್ಟ್ ರಚನೆ ಮಾಡಿ, ಸರಕಾರಕ್ಕೆ ಪ್ರಸ್ತಾವನೆ  ನೀಡಿ ಒಪ್ಪಿಗೆ ಪಡೆಯಲಾಗುತ್ತದೆ ಎಂದರು.

ಮನೆ ನಿರ್ಮಾಣದ ಕಂತು ಹಣ ಬಿಡುಗಡೆಯಾಗದಿರುವ ಕಾರಣ ಮನೆ ನಿರ್ಮಾಣಕ್ಕೆ  ತೊಡಕಾಗಿದ್ದು, ಹಲವೆಡೆ ನಿರ್ಮಾಣ ಕಾರ್ಯ ಲಾಕ್ ಆಗಿದೆ. ಈ ಬಗ್ಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಭೆ ನಡೆಸಿ ವರದಿ ನೀಡುವಂತೆ ಸಚಿವರು ಸೂಚನೆ ನೀಡಿದರು.

ಕ್ರಶರ್‍ಗಳ ಸಮಸ್ಯೆ ಪರಿಹಾರಕ್ಕೆ ಸೆಪ್ಟೆಂಬರ್ 30 ರೊಳಗೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂಇತರ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸುವಂತೆ ಅವರು ತಿಳಿಸಿದರು.ಆಯುಷ್ಮಾನ್ ಭಾರತ್‍ನಲ್ಲಿ ಚಿಕಿತ್ಷೆ ನೀಡುವಲ್ಲಿ ಉಂಟಾಗಿರುವ ತೊಡಕುಗಳ ಬಗ್ಗೆ ಮಾಹಿತಿ ಪಡೆದ ಅವರು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ಶಾಸಕ ಕೆ. ರಘುಪತಿ ಭಟ್,  ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬೈಂದೂರು ಶಾಸಕ ಬಿ ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ನಿಶಾ ಜೇಮ್ಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮತ್ತಿತತರು ಉಪಸ್ಥಿತರಿದ್ದರು.