ತೈಲಬೆಲೆ ಏರಿಕೆ ಖಂಡಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಉಡುಪಿ: ತೈಲ ಬೆಲೆ ಏರಿಕೆ ಖಂಡಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಉಡುಪಿ‌ ಡಯಾನ ಸರ್ಕಲ್ ಬಳಿಯ ಶೆಟ್ಟಿ ಪೆಟ್ರೋಲ್ ಬಂಕ್ ಬಳಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಲೀಟರ್ ಪೆಟ್ರೋಲ್ ಕಚ್ಚಾತೈಲಕ್ಕೆ ₹ 31 ರೂ. ಆಗಿದ್ದು, ಸಂಸ್ಕರಣೆ ವೆಚ್ಚ ಹಾಗೂ ಡೀಲರ್ ಕಮಿಷನ್ ಸೇರಿ ₹ 39 ದರದಲ್ಲಿ ಗ್ರಾಹಕರಿಗೆ ನೀಡಬಹುದು. ಆದರೆ ರಾಜ್ಯ ಸರಕಾರದ ವ್ಯಾಟ್ ಹಾಗೂ ಸ್ಥಳೀಯ ತೆರಿಗೆ ₹ 25.32 ಹಾಗೂ ಕೇಂದ್ರದ ಅಬಕಾರಿ ಸುಂಕ ₹ 35 ರೂಪಾಯಿ ಸೇರಿ ಒಟ್ಟು ಪೆಟ್ರೋಲ್ ಬೆಲೆ ಲೀಟರಿಗೆ ₹ 100 ಗಡಿ ದಾಟಿದೆ. ಆ ಮೂಲಕ ಕೇಂದ್ರದ ನರೇಂದ್ರ ಮೋದಿ ಸರಕಾರ ಜನರನ್ನು ಲೂಟಿ ಮಾಡುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ ಮಾತನಾಡಿ, ಕೇಂದ್ರ ಸರ್ಕಾರ ಕೊರೊನಾ ಸಂಕಷ್ಟದ ಸಮಯದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಏರಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಟೀಕಿಸಿದರು.

ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್ ಮತ್ತು ಜ್ಯೋತಿ ಹೆಬ್ಬಾರ್ ಈ ಸಂದರ್ಭದಲ್ಲಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ. ಕುಶಲ್ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ, ಕೀರ್ತಿ ಶೆಟ್ಟಿ, ಬ್ಲಾಕ್ ಉಪಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಗರಸಭೆ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಮಾಧವ ಬನ್ನಂಜೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಉಡುಪಿ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಲಕ್ಷ್ಮಣ ಪೂಜಾರಿ, ಉದಯ, ಜೈವೀರ್, ಯಾದವ ಆಚಾರ್ಯ, ಸಂಜಯ ಆಚಾರ್ಯ, ಗಣೇಶ್ ದೇವಾಡಿಗ, ಆರ್.ಕೆ. ರಮೇಶ್, ಸುನಿಲ್ ಬೈಲಕೆರೆ, ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಹಮದ್, ಶ್ರೀನಿವಾಸ ಹೆಬ್ಬಾರ್, ಕೃಷ್ಣ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು