ಬಸ್ ಟಿಕೆಟ್ ದರ ಏರಿಸುವ ಮೂಲಕ ಜನಸಾಮಾನ್ಯರ ಸುಲಿಗೆ: ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ

ಉಡುಪಿ: ಕೋವಿಡ್-19 ಮೊದಲ ಲಾಕ್ ಡೌನ್ ಬಳಿಕ ಖಾಸಗಿ ಬಸ್ ಟಿಕೆಟ್ ದರವನ್ನು ಶೇ. 15ರಷ್ಟು ಹೆಚ್ಚಿಸಲಾಗಿತ್ತು. ಲಾಕ್‌ಡೌನ್ ಸಡಿಲಿಕೆ ಆದರೂ ಇಂಧನ ಬೆಲೆ ಏರಿಕೆಯ ನೆಪವೊಡ್ಡಿ ಟಿಕೆಟ್ ದರವನ್ನು ಇಳಿಕೆ ಮಾಡಲಿಲ್ಲ. ಇದೀಗ ಕೋವಿಡ್ 19 ಎರಡನೇ ಅಲೆಯ ಲಾಕ್‌ಡೌನ್ ಸಡಿಲಿಕೆ ಆಗಿದ್ದು, ಬಸ್ ಟಿಕೆಟ್ ದರವನ್ನು ಶೇ.25ರಷ್ಟು ಹೆಚ್ಚಿಸಲು ಸರಕಾರ ಅನುಮತಿ‌ ನೀಡಿದೆ. ಆ ಮೂಲಕ ಸರ್ಕಾರ ಕೊರೊನಾ ಸಂಕಷ್ಟ ಕಾಲದಲ್ಲೂ ಜನಸಾಮಾನ್ಯರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಕೆಲವೇ ತಿಂಗಳುಗಳ ಅಂತರದಲ್ಲಿ ಎರಡು ಬಾರಿ ಬಸ್ ಟಿಕೆಟ್ ದರ ಹೆಚ್ಚಿಸಿರುವುದು ಕಾನೂನು ಪ್ರಕಾರ ಸರಿಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್, ಕಳೆದೆರಡು ವರ್ಷದಿಂದ ಖಾಸಗಿ ಬಸ್‌ಗಳ ದರ ಸುಮಾರು ಶೇ. 100ರಷ್ಟು ಏರಿಕೆಯಾಗಿದೆ. ಕನಿಷ್ಠ ₹13 ಇದ್ದ ಟಿಕೆಟ್ ದರ ಕೋವಿಡ್ ಮೊದಲ ಅಲೆಯ ವೇಳೆ 20ಕ್ಕೆ ಏರಿಕೆಯಾಯಿತು. ಇದೀಗ ₹25 ಆಗುವ ಸಾಧ್ಯತೆ ಇದೆ ಎಂದು ಕಿಡಿಕಾರಿದೆ.

ಬಸ್‌ ಮಾಲೀಕರಿಂದ ತೆರಿಗೆ ಪಡೆಯುವಾಗ ಅದರಲ್ಲಿ ನಿರ್ದಿಷ್ಟ ಮೊತ್ತವನ್ನು ಕಾಯ್ದಿರಿಸಿ, ಪ್ರಕೃತಿ ವಿಕೋಪ ಅಥವಾ ಇಂಧನ ಬೆಲೆ ಮಿತಿ ಮೀರಿದಾಗ ಡೀಸೆಲ್‌ಗೆ ಸಬ್ಸಿಡಿ ನೀಡಿ ಸರಕಾರ ಸಹಾಯ ಮಾಡಬೇಕು. ಅಲ್ಲದೆ, 2 ಲಾಕ್‌ಡೌನ್ ಅವಧಿಯಲ್ಲಿ ಕಟ್ಟಬೇಕಾದ ತೆರಿಗೆಯನ್ನು ಸರಕಾರ ಸಂಪೂರ್ಣ ಮನ್ನಾ ಮಾಡಬೇಕು. ಲಾಕ್‌ಡೌನ್ ಅವಧಿಯ ಬಸ್‌ ಸಾಲದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿದೆ.

ಕಳೆದ ಎರಡು ತಿಂಗಳಿನಿಂದ ದುಡಿಮೆ ಇಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಬಸ್ ಚಾಲಕರು ಹಾಗೂ ನಿರ್ವಾಹಕರ ಖಾತೆಗಳಿಗೆ ಸರ್ಕಾರ ಕನಿಷ್ಠ ₹ 10 ಸಾವಿರ ಹಾಕಬೇಕು ಎಂದು ಒತ್ತಾಯಿಸಿದೆ.

ಕೋವಿಡ್ ಎರಡನೇ ಅಲೆ, ಪೆಟ್ರೋಲ್, ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರನ್ನು ಬಸ್ ದರ ಏರಿಸಿ ಸರ್ಕಾರ ಮತ್ತಷ್ಟು ಸುಲಿಗೆ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಉಪಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ನಗರಸಭಾ ಸದಸ್ಯ ವಿಜಯ ಪೂಜಾರಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಭಂಡಾರ್ಕಾರ್, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಮಾಜಿ ನಗರಸಭಾ ಸದಸ್ಯರುಗಳಾದ ಶಶಿರಾಜ್ ಕುಂದರ್, ಸುಕೇಶ್ ಕುಂದರ್ ಖಂಡಿಸಿದ್ದಾರೆ.