ಉಡುಪಿ: ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಜನರ ಕಷ್ಟ ಕೇಳಲು ರಾಜ್ಯಕ್ಕೆ ಬಂದಿಲ್ಲ. ಕಪ್ಪ ಕೇಳಲು ಬಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರ್ಜೇವಾಲಾ ಅವರು ಆಗಾಗ ಬರುತ್ತಿರುತ್ತಾರೆ. ಕಾಂಗ್ರೆಸ್‌ನಲ್ಲಿ ಕಪ್ಪ ಕೊಡುವ ವಾಡಿಕೆ ಇದೆ. ಹಿಂದೆ ಮೊಗಲರ ಆಳ್ವಿಕೆಯಲ್ಲಿ ಕಪ್ಪ ಕೊಡುವ ಪದ್ಧತಿ ಇತ್ತಂತೆ. ಇದೀಗ ಕಾಂಗ್ರೆಸ್ ಆಡಳಿತದಲ್ಲಿಯೂ ಅದೇ ಪದ್ಧತಿ ಇದೆ ಎಂದು ಟೀಕಿಸಿದರು.
ರಾಜ್ಯ ಕಾಂಗ್ರೆಸ್‌ನವರು ಕೇಂದ್ರದ ಕಾಂಗ್ರೆಸ್‌ಗೆ ಕಪ್ಪ ಕೊಡಬೇಕು. ಕೊಡದಿದ್ದರೆ ಅವರು ಪದಚ್ಯುತಿಗೊಳ್ಳುತ್ತಾರೆ. ಹಿಂದೆ ಕಪ್ಪ ಕೊಡದ ಕಾರಣಕ್ಕೆ ವೀರೇಂದ್ರ ಪಾಟೀಲ ಅವರನ್ನು ಪಕ್ಷದಿಂದ ಪದಚ್ಯುತಿಗೊಳಿಸಲಾಗಿತ್ತು. ಯಾರು ಅಧಿಕಾರದಲ್ಲಿ ಉಳಿಯಬೇಕೋ ಅವರು ಕಪ್ಪ ಕೊಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಸುರ್ಜೇವಾಲ ಅವರಿಗೆ ಜನರ ಕಷ್ಟ ಕೇಳುವ ಅಭ್ಯಾಸ ಇಲ್ಲ ಎಂದು ಹೇಳಿದರು.
ಬೆಲೆ ಏರಿಕೆಯ ಹೊರೆಯನ್ನು ಜನರಿಗೆ ಹೊರಿಸಿ ಇಡೀ ಸರ್ಕಾರವೇ ಕೈ ಎತ್ತಿದೆ. ಸರ್ಕಾರವು ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಿಗಳಿಗೆ ಶರಣಾಗಿದೆ. ಇನ್ನು ಜನರು ಕಾಂಗ್ರೆಸ್ ವಿರುದ್ಧ ಕೈ ಎತ್ತುವುದು ಬಾಕಿ ಇದೆ ಎಂದು ಕಿಡಿಕಾರಿದರು.












