ಉಡುಪಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಲ್ಲದೆ, ದಂಡ ಕಟ್ಟಲು ಸೂಚಿದ ಟ್ರಾಫಿಕ್ ಎಸ್ಐಗೆ ಧಮ್ಕಿ‌ ಹಾಕಿದ ಬಿಜೆಪಿ ಯುವ ನಾಯಕಿ

ಉಡುಪಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಲ್ಲದೆ, ದಂಡ ಕಟ್ಟಲು ಸೂಚಿದ ಟ್ರಾಫಿಕ್ ಎಸ್ಐಗೆ ಯುವತಿಯೊಬ್ಬಳು ಧಮ್ಕಿ ಹಾಕಿದ ಘಟನೆ ಉಡುಪಿ ಕ್ಲಾಕ್ ಟವರ್ ಬಳಿ ನಡೆದಿದೆ.

ಆವಾಜ್ ಹಾಕಿದ ಯುವತಿಯನ್ನು ನೀತಾ ಪ್ರಭು ಎಂದು ಗುರುತಿಸಲಾಗಿದ್ದು, ಈಕೆ ಬಿಜೆಪಿ ಯುವಮೋರ್ಚಾದ ನಾಯಕಿ ಎಂದು ತಿಳಿದುಬಂದಿದೆ.
ನಗರದಲ್ಲಿ ಜನತಾ ಕರ್ಪ್ಯೂ ಜಾರಿಯಲ್ಲಿರುವುದರಿಂದ ಅನಗತ್ಯವಾಗಿ ಸಂಚರಿಸುತ್ತಿದ್ದವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿದ್ದರು.

ಈ ವೇಳೆ ನೀತಾ ಪ್ರಭು ಮೊಬೈಲ್ ನಲ್ಲಿ ಮಾತನಾಡಿಕೊಂಡು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಳು. ಇದನ್ನು ಕಂಡ ಟ್ರಾಫಿಕ್ ಎಸ್ ಐ ಅಬ್ದುಲ್ ಖಾದರ್ ಕಾರು ಬದಿಗೆ ಹಾಕಿ ದಂಡ ಪಾವತಿಸುವಂತೆ ಆಕೆಗೆ ಸೂಚಿಸಿದ್ದಾರೆ.

ಇದಕ್ಕೆ ರೊಚ್ಚಿಗೆದ್ದ ಆಕೆ ಎಸ್ಐ ವಿರುದ್ಧವೇ ಎಗರಾಡಿದ್ದಾಳೆ. ಮೊಬೈಲ್ ನಲ್ಲಿ ದೃಶ್ಯ ಚಿತ್ರೀಕರಿಸುತ್ತಿದ್ದ ಇತರ ಸಿಬ್ಬಂದಿ ವಿರುದ್ಧವೂ ರೇಗಾಡಿದ್ದಾಳೆ. ಅಲ್ಲದೆ, ಚಿತ್ರೀಕರಣ ನಿಲ್ಲಿಸುವಂತೆ ಅವಾಜ್ ಹಾಕಿದ್ದಾಳೆ.

ಇಷ್ಟಕ್ಕೆ ಆಕೆಯ ಕೋಪತಾಪ ನಿಲ್ಲಲಿಲ್ಲ. ನೀವು ಫೈನ್ ಕಟ್ಟಿಕೊಳ್ಳಿ. ನನಗೆ ಈಗ ಮಾತನಾಡಲು ಪುರ್ಸೊತ್ತು ಇಲ್ಲ. ನಾನು ಅರ್ಜೆಂಟ್ ಕೆಲಸದಲ್ಲಿ ಇದ್ದೇನೆ. ಮತ್ತೆ ನಿಮಗೆ ನಾನು ಯಾರು ಅಂಥಾ ತೋರಿಸ್ತೇನೆ ಎಂದು ಎಸ್ಐಗೆ ಧಮ್ಕಿ ಹಾಕಿದ್ದಾಳೆ. ನೀವು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾಳೆ.

ಇದಕ್ಕೆ ಉತ್ತರಿಸಿದ ಎಸ್ ಐ ಖಾದರ್, ನಾವು ಕೋವಿಡ್ ಕರ್ಪ್ಯೂ ಹಿನ್ನಲೆಯಲ್ಲಿ ನಗರದಲ್ಲಿ ಅನಗತ್ಯವಾಗಿ ತಿರುಗಾಡುವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ನಾವು ನಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ರಸ್ತೆ ನಿಯಮ ಉಲ್ಲಂಫಿಸಿದರೆ ಸುಮ್ಮನೆ ನೋಡಿಕೊಂಡು ಕೂರಲು ಆಗಲ್ಲ. ನೀವು ಕಾರು ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಆಕೆ, ನಾನು ಮತ್ತೆ ಮಾತನಾಡಿಕೊಂಡು ಹೋಗುತ್ತೇನೆಂದು ಉಡಾಫೆಯಾಗಿ ಉತ್ತರಿಸಿದ್ದಾಳೆ.