ಉಡುಪಿ: ಬಿಜೆಪಿ ಉಡುಪಿ ನಗರ ಘಟಕದ ವತಿಯಿಂದ ಇದೇ 30ರಂದು ಸಂಜೆ 5ಗಂಟೆಗೆ ಉಡುಪಿ ಕಿದಿಯೂರು ಹೋಟೆಲ್ನ ಶೇಷಯನ ಸಭಾಂಗಣದಲ್ಲಿ ಬಿಜೆಪಿ ಸಂಕಲ್ಪ ಸಮಾವೇಶ ಹಾಗೂ ಉಡುಪಿ ನಗರ ಬಿಜೆಪಿಯ ನಿಯೋಜಿತ ಅಧ್ಯಕ್ಷ ಮಹೇಶ್ ಠಾಕೂರ್ ಅವರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಉಡುಪಿ ನಗರ ಬಿಜೆಪಿಯ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ನಗರ ವ್ಯಾಪ್ತಿಯಡಿ ಬರುವ 132 ಬಿಜೆಪಿ ಮತಗಟ್ಟೆ ಸಮಿತಿಯ ಅಧ್ಯಕ್ಷರ ಪದಗ್ರಹಣ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಕೂಡ ಜರುಗಲಿದೆ. 1962ರ ಬಳಿಕ ಜನಸಂಘ ಕಾಲದಿಂದ 2018ರ ವರೆಗಿನ ಬಿಜೆಪಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಜಯಗಳಿಸಿದ ಎಲ್ಲ ಪುರಸಭಾ ಹಾಗೂ ನಗರಸಭಾ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ನಿಕಟ ಪೂರ್ವ ಅಧ್ಯಕ್ಷ ರಾಘವೇಂದ್ರ ಕಿಣಿ ಮಾತನಾಡಿ, ಇದೇ ವೇಳೆ ದೇಶದ ಪ್ರಪ್ರಥಮ ಜನಸಂಘದ ಸ್ಥಳೀಯ ಸಂಸ್ಥೆಯ ಪ್ರತಿನಿಧಿ ತೋನ್ಸೆ ದೇವದಾಸ್ ಪೈ ಗೌರವಿಸಲಾಗುವುದು.
ಶಾಂತ ವಿ.ಎಸ್. ಆಚಾರ್ಯ, ಸೋಮಶೇಖರ್್ ಭಟ್, ಗುಜ್ಜಾಡಿ ಪ್ರಭಾಕರ ನಾಯಕ್ ಅವರನ್ನು ಅಭಿನಂದಿಸಲಾಗುವುದು. 2018ರ ನಗರಸಭೆ ಚುನಾವಣೆಯಲ್ಲಿ ಚುನಾಯಿತರಾದ 31 ಬಿಜೆಪಿ ನಗರಸಭಾ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮಾವೇಶ ಉದ್ಘಾಟಿಸುವರು. ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸುವರು. ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿಯ ನಿಯೋಜಿತ ಅಧ್ಯಕ್ಷ ಮಹೇಶ್ ಠಾಕೂರ್, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉಪೇಂದ್ರ ನಾಯಕ್, ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಗಿರೀಶ್ ಅಂಚನ್, ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ಜಗದೀಶ್ ಆಚಾರ್ಯ ಇದ್ದರು.