ಉಡುಪಿ: ಏಕ ವಿನ್ಯಾಸ ನಕ್ಷೆಯ ಅವ್ಯವಸ್ಥೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಉಡುಪಿ: ‘ಏಕ ವಿನ್ಯಾಸ ನಕ್ಷೆ’ (9/11) ಯ ಅವ್ಯವಸ್ಥೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಒಬಿಸಿ ಮೋರ್ಚಾ ಜಂಟಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ‌ ಇಂದು‌ ಪ್ರತಿಭಟನೆ‌ ನಡೆಸಲಾಯಿತು.

ಜಿಲ್ಲೆಯಾದ್ಯಂತ ‘ಏಕ ವಿನ್ಯಾಸ ನಕ್ಷೆ’ ಅನುಮೋದನೆಗೆ ರಾಜ್ಯ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಇದರಿಂದ ಜನಸಾಮಾನ್ಯರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಜ್ವಲಂತ ಸಮಸ್ಯೆಯ ಕೂಡಲೇ ಪರಿಹರಿಸಬೇಕು‌ ಎಂದು ಬಿಜೆಪಿ‌ ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಅವರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9/11, ಕೆಂಪು ಕಲ್ಲು, ಮರಳು ಹೀಗೆ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಕಣ್ಣು, ಕಿವಿ ಸರಿ ಇಲ್ಲದಂತೆ ವರ್ತಿಸುತ್ತಿದೆ. ಇದು ಹೀಗೆ ಮುಂದುವರಿದರೆ ಸರಕಾರದ ಕಣ್ಣು ಮತ್ತು ಕಿವಿಯನ್ನು‌ ಬಿಜೆಪಿ ಸರಿ‌ ಮಾಡಬೇಕಾದ ಅನಿವಾರ್ಯತೆ ಬರಬಹುದು ಎಂದರು.

ಸರಕಾರ ಧೋರಣೆ ಖಂಡಿಸಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 399 ಗ್ರಾಪಂ ಮುಂಭಾಗದಲ್ಲಿ ಬಿಹೆಪಿ ಪ್ರತಿಭಟನೆ ನಡೆಸಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಎರಡು ಜಿಲ್ಲೆಯ ಕಾಂಗ್ರೆಸ್ ನಾಯಕರು ಅವರ ಸರಕಾರದ ವಿರುದ್ಧವೇ ಸತ್ಯದರ್ಶನದ ಹೆಸರಿನಲ್ಲಿ ಗ್ರಾಪಂ ಮುಂಭಾಗದಲ್ಲಿ ಪ್ರತಿಭಟನೆ ಮಾಡುವ ಮೂಲಕ ತಮಗೆ ಎಷ್ಟು ತಿಳುವಳಿಕೆ ಇದೆ ಎಂಬುವುದನ್ನು ಸಾಬೀತು ಪಡಿಸಿದ್ದಾರೆ.

ಕಾಂಗ್ರೆಸ್‌ ದೇಶದಲ್ಲಿ 60 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಒಂದು ವೇಳೆ ಅವರು ಸತ್ಯದ ಮೂಲಕ ಆಡಳಿತ ನಡೆಸಿದ್ದರೆ ದೇಶಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನರೇಂದ್ರ ಮೋದಿ ಅವರ ನಾಯಕತ್ವ ಈ ದೇಶಕ್ಕೆ ಸಿಕ್ಕಿದರಿಂದ ಇಂದು ಭಾರತ ದೇಶವು ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಕಾಂಗ್ರೆಸ್ ನಾಯಕರು ದ್ವೇಷದ ರಾಜಕಾರಣವನ್ನು ಬಿಡಬೇಕು. ಜನರ ಕೆಲಸಕ್ಕೆ ಕೈಜೋಡಿಸುವ ಕಾರ್ಯ ಮಾಡಬೇಕು. ಏಕ ವಿನ್ಯಾಸ ನಕ್ಷೆಯ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು. ಈ ಹಿಂದೆ 25 ಸೆಂಟ್ಸ್ ವರೆಗಿನ ಜಾಗಕ್ಕೆ ಏಕ ವಿನ್ಯಾಸ ನಕ್ಷೆ ನೀಡಲು ಅವಕಾಶವಿತ್ತು. ಅದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕೆಂಪು ಕಲ್ಲು, ಮರಳು, 9/11 ಸಹಿತ ಹಲವಾರು ಸಮಸ್ಯೆಗಳಿಂದ ಅವಿಭಜಿತ ದಕ್ಷಿಣ ಜಿಲ್ಲೆಯ ಜನರು ಒದ್ದಾಡುತ್ತಿದ್ದಾರೆ. ಆದರೆ ಈ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಇಚ್ಛಾಶಕ್ತಿಯಿಲ್ಲ‌. ಉದ್ದೇಶಪೂರ್ವಕವಾಗಿ ಸರಕಾರ ಈ ಸಮಸ್ಯೆಗಳನ್ನು ಸೃಷ್ಟಿದೆ. ಇದರ ಹಿಂದೆ ಷಡ್ಯಂತರ ಇದೆ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮುಖಂಡರಾದ ರತ್ನಾಕರ ಹೆಗ್ಡೆ ಮಟ್ಟಾರು, ಉದಯಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ ಮೊದಲಾದವರು ಇದ್ದರು.