ಉಡುಪಿ: ಬಿಜೆಪಿ ಮಹಿಳಾ ಮೋರ್ಚಾದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಯಾದರೆ 70ರಿಂದ 80ರಷ್ಟು ಮಹಿಳೆಯರು ವಿಧಾನಸಭೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮೋರ್ಚಾ ಇನ್ನಷ್ಟು ಸಂಘಟಿತವಾಗಬೇಕು. ಪಕ್ಷದಲ್ಲಿ ಪೈಪೋಟಿ ಇರುವುದು ಸಹಜ. ಆದರೆ ಬದ್ಧತೆಯಿಂದ ಪಕ್ಷದ ಹಿತಕ್ಕಾಗಿ ಕೆಲಸ ಮಾಡಿದರೆ ಮುಂದೊಂದು ದಿನ ಎತ್ತರದ ಸ್ಥಾನವನ್ನು ಏರಲು ಸಾಧ್ಯವಿದೆ. ಅಂತಹ ಅವಕಾಶ ಬಿಜೆಪಿ ಪಕ್ಷದಲ್ಲಿ ಇದೆ. ಹಾಗಾಗಿ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಮಹಿಳೆಯರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ‌ ಮಹಿಳಾ ಮೋರ್ಚಾ ಕಾರ್ಯೋನ್ಮುಖವಾಗಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮಹಿಳಾ ಸದಸ್ಯರನ್ನು ಗೌರವಿಸಲಾಯಿತು.ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾ ಮೋರ್ಚಾದ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮುಖಂಡರಾದ ಕಸ್ತೂರಿ ಪಂಜ, ರೇಷ್ಮಾ ಉದಯ್ ಶೆಟ್ಟಿ, ನಯನ ಗಣೇಶ್, ಜ್ಯೋತಿ ಉದಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.