ಉಡುಪಿ ಬಿಜೆಪಿ ಮುಖಂಡನ ಪತ್ನಿಯ ಸಾವು ಪ್ರಕರಣ: ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಪ್ರತಿಭಟನೆ

ಉಡುಪಿ: ಉಡುಪಿ ಇಂದಿರಾ ನಗರದ ನಿವಾಸಿ, ಬಿಜೆಪಿ ಯುವ ಮೋರ್ಚಾದ ಉಡುಪಿ ನಗರ ಉಪಾಧ್ಯಕ್ಷ ಶಿವಪ್ರಸಾದ್ ಅವರ ಪತ್ನಿ ರಕ್ಷಾ (26) ಎಂಬುವವರು ಶುಕ್ರವಾರ ಮೃತಪಟ್ಟಿದ್ದು, ಅವರ ಸಾವಿಗೆ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಉಡುಪಿ ಜಿಲ್ಲಾಸ್ಪತ್ರೆಯ ಶವಗಾರದ ಮುಂದೆ ಇಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಮೃತ ರಕ್ಷಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ ಕುಟುಂಬಸ್ಥರು ಪಾಸಿಟಿವ್ ವರದಿ ಬಂದಿದ್ದರೂ ಮೃತ ದೇಹವನ್ನು ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಭದ್ರತೆಯ ದೃಷ್ಟಿಯಿಂದ ಆಸ್ಪತ್ರೆಯ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಕ್ಷಾ ಅವರು ಕಳೆದ ಮೂರು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆ. 21ರಂದು ಬೆಳಿಗ್ಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದು ಕೊಂಡು ಹೋಗಿದ್ದರು. ಮನೆಯಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಮಲಗಿದ್ದ ರಕ್ಷಾ ಅವರು ಬಳಿಕ ಮೃತಪಟ್ಟಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಪತ್ನಿಯ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ. ಅವರು ನೀಡಿದ ಇಂಜೆಕ್ಷನ್‌ನಿಂದಲೇ ನನ್ನ ಪತ್ನಿ ಸಾವನ್ನಾಪ್ಪುವಂತಾಗಿದೆ ಎಂದು ಪತಿ ಶಿವಪ್ರಸಾದ್ ಆರೋಪಿಸಿದರು.

ಮೃತಪಟ್ಟ ಬಳಿಕ ನಡೆಸಿದ ರ್ಯಾಪಿಡ್ ಟೆಸ್ಟ್‌ನಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ನಂತರ ಪ್ರಯೋಗಾಲಯದಲ್ಲಿ ನಡೆಸಿದ ವರದಿಯಲ್ಲಿ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಸ್ಪತ್ರೆಯವರು ಹೇಳಿದ್ದಾರೆ. ಇದರಲ್ಲಿ ವೈದ್ಯರ ಷಡ್ಯಂತರ ಅಡಗಿದೆ ಎಂದು ದೂರಿದರು.

ಯಾರು ಕೊಟ್ಟ ವರದಿಯನ್ನು ನಾವು ನಂಬಬೇಕು. ಮೊದಲು ಬಂದ ವರದಿಯೇ ಅಥವಾ ಈಗ ನೀಡಿದ ವರದಿಯೇ. ಇವರು ಕೊರೊನಾ ದಂಧೆ ಮಾಡುತ್ತಿದ್ದಾರೆ. ನಮಗೆ ಕೊರೊನಾ ಬಂದರೂ ಪರವಾಗಿಲ್ಲ, ನಾನು ಮೃತದೇಹವನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ವರದಿಯ ಹಿಂದೆ ದೊಡ್ಡ ಆಸ್ಪತ್ರೆಗಳ ಲಾಬಿ ಇರಬಹುದು. ಈ ರೀತಿ ಝೆರಾಕ್ಸ್ ಪ್ರತಿಯಲ್ಲಿ ವರದಿ ನೀಡಿರುವುದು ಸರಿಯಲ್ಲ. ಇದು ಜನರ ಬಾಯಿ ಮುಚ್ಚಿಸುವ ಹುನ್ನಾರ ಎಂದು ನಗರಸಭಾ ಸದಸ್ಯ ರಮೇಶ್ ಕಾಂಚನ್ ಆರೋಪಿಸಿದ್ದಾರೆ.

ಜಿಲ್ಲಾಸ್ಪತ್ರೆಯ ವೈದ್ಯರ ವರದಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪ್ರತಿಭಟನಕಾರರು, ಜಿಲ್ಲಾಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Udupi BJP leader’s wife’s death
The accused protested that the negligence was the cause of death