ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಉಡುಪಿ ಪುರಸಭೆ (ಇಂದಿನ ನಗರಸಭೆ)ಯ ಮಾಜಿ ಅಧ್ಯಕ್ಷ, ಹಿರಿಯ ಬಿಜೆಪಿ ಮುಖಂಡ ಸೋಮಶೇಖರ್ ಭಟ್ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಪ್ರಧಾನಿ ಮೋದಿಯವರು ಸೋಮಶೇಖರ್ ಅವರೊಂದಿಗೆ ಎರಡು ನಿಮಿಷಗಳ ಮಾತನಾಡಿದ್ದು, ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಸೋಮಶೇಖರ್ ಭಟ್ ತಾವು ಜೈಪುರದಲ್ಲಿ ಪುರಸಭೆ ಸದಸ್ಯರ ಅಧಿವೇಶನದಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಸಂದರ್ಭ ಹಾಗೂ ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲು ಸೇರಿದ್ದ ಘಟನೆಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
1968ರಲ್ಲಿ ಭಾರತೀಯ ಜನಸಂಘ (ಇಂದಿನ ಬಿಜೆಪಿ) ದಕ್ಷಿಣ ಭಾರತದಲ್ಲಿ ಉಡುಪಿಯಲ್ಲಿ ಮೊದಲ ಪುರಸಭೆಯ ಚುಕ್ಕಾಣಿ ಹಿಡಿದಿತ್ತು. ಇದು ದೇಶದಲ್ಲಿ ಪಕ್ಷದ ಬಲವರ್ಧನೆಗೆ ಮೊದಲ ಅಡಿಪಾಯವೂ ಆಗಿತ್ತು. ಜನಸಂಘವು ಉಡುಪಿ ಪುರಸಭೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಸಂದರ್ಭದಲ್ಲಿ ತಾನೂ ಪುರಸಭೆ ಸದಸ್ಯನಾಗಿದ್ದೆ ಹಾಗೂ ವಿ.ಎಸ್. ಆಚಾರ್ಯ ಅವರು ಅಧ್ಯಕ್ಷರಾಗಿದ್ದರು ಎಂದು ಸೋಮಶೇಖರ್ ಭಟ್ ಮೆಲುಕು ಹಾಕಿದ್ದಾರೆ.