udupixpress
Home Trending ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಿ.ಜಿ. ಮೋಹನ್ ದಾಸ್ ವಿಧಿವಶ  

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಿ.ಜಿ. ಮೋಹನ್ ದಾಸ್ ವಿಧಿವಶ  

ಉಡುಪಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಿ.ಜಿ. ಮೋಹನ್ ದಾಸ್ (70) ಅವರು ಅನಾರೋಗ್ಯದಿಂದ ಇಂದು ವಿಧಿವಶರಾದರು.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪತ್ನಿ ಯಶೋದಾ, ಪುತ್ರ ಅಖಿಲ್ ಹಾಗೂ ಪುತ್ರಿ ಯಶಸ್ವಿ ಹಾಗೂ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.
ಮಣಿಪಾಲದಿಂದ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಬೀಜಿಯವರು ಗಲ್ಫ್‌ನಾಡಿಗೆ ವಲಸೆ ಬರುವ ಮುನ್ನ ಮಣಿಪಾಲದಲ್ಲಿ ಫಾರ್ಮಸಿ ವಿಭಾಗದ ಸಹಾಯಕ ಪ್ರೊಪೆಸರ್ ಆಗಿಯೂ ಸೇವೆ ಸಲ್ಲಿಸಿದ್ದು, 1985ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ಮುಂದೆ 1988 ರಲ್ಲಿ ಸಂಘದ ಸಂವಿಧಾನ ರೂಪಿಸಿದ ರೂವಾರಿಗಳಲ್ಲೊಬ್ಬರಾಗಿದ್ದರು. 1989 ರಲ್ಲಿ ದುಬೈ ಕರ್ನಾಟಕ ಸಂಘದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಾಂವಿಧಾನಿಕವಾಗಿ ಚುನಾಯಿತರಾದ ಅಧ್ಯಕ್ಷರಾದರು.1992-94 ರವರೆಗೆ ಕಾರ್ಯದರ್ಶಿಯಾಗಿಯೂ 1996-98ರ ವರೆಗೆ ಉಪಾಧ್ಯಕ್ಷರಾಗಿ ದುಬೈ ಕರ್ನಾಟಕ ಸಂಘದಲ್ಲಿ ಸೇವೆ ಸಲ್ಲಿಸಿರುವ ಯು.ಎ. ಇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಗಲ್ಪ್ ರಾಷ್ಟ್ರಗಳಲ್ಲಾಗುವ ಕನ್ನಡ ಚಟುವಟಿಕೆಗಳನ್ನು ಪ್ರತಿಬಿಂಬಿಸಿ ಕರ್ನಾಟಕ ಮತ್ತು ಕೊಲ್ಲಿ ರಾಷ್ಟ್ರಗಳ ನಡುವಣ ಸೇತುವೆಯಾದ ಉದಯವಾಣಿ ದಿನಪತ್ರಿಕೆಯ ‘ಗಲ್ಪ್ ವಾರ್ತಾ ಸಂಚಯ’ಅಂಕಣ ವನ್ನು ಪ್ರಾರಂಭಿಸುವಲ್ಲಿ ಪ್ರೇರಣೆಯಾದರು. ಗಲ್ಪ್ ಕನ್ನಡಿಗರ ಅಭಿಮಾನಕ್ಕೆ ಸಾಂಸ್ಕೃತಿಕ ಶ್ರ್ರೀಮಂತಿಕೆಗೆ ಕನ್ನಡಿಯಾದ ಈ ಅಂಕಣವು ಬೀಜಿಯವರು ಕನ್ನಡ ಬಾಂಧವರಿಗಿತ್ತ ಒಂದು ಅತ್ಯಮೂಲ್ಯ ಕೊಡುಗೆ ಎನ್ನುವಂತಿತ್ತು. ಬೀಜಿಯವರ ಸಾರ್ಥಕ ಸೇವೆಯನ್ನು ಪರಿಗಣಿಸಿ ಶಾರ್ಜಾ ಕರ್ನಾಟಕ ಸಂಘ 2007 ರ ಪ್ರತಿಷ್ಟಿತ- ’ಮಯೂರ ಪ್ರಶಸ್ತಿ’ ಯನ್ನು , 2002 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯವು ತನ್ನ ಅತ್ಯುನ್ನತ ಪ್ರಶಸ್ತಿಯಾದ ‘ಅತ್ಯುತ್ತಮ ಪೂರ್ವ ವಿದ್ಯಾರ್ಥಿ’ ಪ್ರಶಸ್ತಿ, 2008 ರಂದು ಬಹರೈನ್ ಕನ್ನಡ ಸಂಘದ ಅದ್ದೂರಿಯ ಕಾರ್ಯಕ್ರಮ “ಕನ್ನಡ ವೈಭವ” ದಲ್ಲಿ ಮುಖ್ಯ ಅತಿಥಿ ಕರ್ನಾಟಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯುರಪ್ಪನವರಿಂದ ಕನ್ನಡ ಸೇವೆಗಾಗಿ ನಮ್ಮ ’ಬೀಜಿ’ಯವರು ಸನ್ಮಾನಿತರಾಗಿದ್ದರು. ಯು.ಎ.ಯಿಯ ಪ್ರತಿಷ್ಟ ಕನ್ನಡ ಸಂಸ್ಥೆ ಅಬುದಾಭಿ ಕರ್ನಾಟಕ ಸಂಘ ಆಯೋಜಿಸಿದ ರಾಜ್ಯೋತ್ಸವ 2009 ರಲ್ಲಿಯೂ ಸನ್ಮಾನಿತರಾದರು.