ಬರಹ ರೂಪದ ಹಾಸ್ಯ ಸಾಹಿತ್ಯಕ್ಕೆ ಬರಗಾಲ: ಡಾ.‌ಮಹಾಬಲೇಶ್ವರ ರಾವ್

ಉಡುಪಿ: ಇಂದು ಕನ್ನಡದಲ್ಲಿ ಬರಹ ರೂಪದ ಹಾಸ್ಯ ಸಾಹಿತ್ಯಕ್ಕೆ ಬರಗಾಲ ಬಂದಿದ್ದು, ಹಾಸ್ಯ ಸಾಹಿತಿಗಳ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ ಎಂದು ಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್‌ ಆತಂಕ ವ್ಯಕ್ತಪಡಿಸಿದರು.
ಸುಹಾಸಂ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ನಗರದ ಕಿದಿಯೂರು ಹೋಟೆಲ್‌ನ ಪವನ್‌ ರೂಫ್‌ಟಾಪ್‌ನಲ್ಲಿ ಭಾನುವಾರ ನಡೆದ ಎಚ್‌. ಶಾಂತರಾಜ ಐತಾಳ್‌ ಅವರ ‘ಆಯುಬೊವಾನ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಸ್ಯದ ಮೂಲಕ ವ್ಯಂಗ್ಯವಾಗಿ ಬದುಕಿನ ದುರಂತ, ವೈಚಿತ್ರ, ಅನನ್ಯತೆಗಳನ್ನು ಕಟ್ಟಿಕೊಡುವ ಪ್ರಯತ್ನ ಹಾಗೂ ಜೀವನ ದರ್ಶನವನ್ನು ಒದಗಿಸುವ ಪರಿ ಕನ್ನಡದಲ್ಲಿ ಕಡಿಮೆ ಆಗಿದೆ. ಹಾಸ್ಯ ಲೇಖಕರಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ಬರೆಯುವವರ ಸಂಖ್ಯೆ ಕುಂಠಿತಗೊಂಡಿದೆ. ಗುಣಮಟ್ಟದಿಂದ ಕೂಡಿದ ಹಾಸ್ಯ ಬರಹಗಳು ಬರುತ್ತಿಲ್ಲ. ಓದುವ ಸಾಹಿತ್ಯಕ್ಕಿಂತ ನೋಡುವ, ಕೇಳುವ ಸಾಹಿತ್ಯವೇ ಪ್ರಧಾನ ಆಗಿಬಿಟ್ಟಿರುವುದೇ ಇದಕ್ಕೆ ಮುಖ್ಯ ಕಾರಣ ಎಂದರು.
ವಿದ್ಯಾನ್ಮಾನ ಮಾಧ್ಯಮಗಳ ನಗೆಹಬ್ಬ, ಮಜಾಟಾಕೀಸ್‌, ಮಜಾಭಾರತ್‌, ಕಾಮಿಡಿ ಕಿಲಾಡಿ ಮೊದಲಾದ ಹಾಸ್ಯ ಕಾರ್ಯಕ್ರಮಗಳಲ್ಲಿ ಬರುವ ಹಾಸ್ಯ ಅತೀ ಉತ್ಪ್ರೇಕ್ಷಿತವಾಗಿದೆ. ಅಶ್ಲೀಲ, ದ್ವಂಧ್ವಾರ್ಥದಿಂದ ಕೂಡಿದೆ. ಇವು ಸುಲಭವಾಗಿ ಸಿಗುವ ಹಾಗೂ ಘಳಿಗೆಯಲ್ಲಿ ನಗು ತರಿಸುವ ಹಾಸ್ಯವನ್ನು ಸೃಷ್ಟಿಸುವ ಕಾರ್ಖಾನೆಗಳಾಗಿವೆ. ಅಲ್ಲದೆ ನಮ್ಮ ಅಭಿರುಚಿಯನ್ನು ಕಿತ್ತುಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆಗೊಳಿಸಿ ಬೆಂಗಳೂರು ಹಾಸ್ಯ ತರಂಗ ಕಲಾಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್‌.ಎಸ್‌. ಪಡಶೆಟ್ಟಿ ಮಾತನಾಡಿ, ಹಲ್ಲು ಕಿರಿಯುವ ಹಾಸ್ಯಕ್ಕಿಂತ ಮನಸ್ಸು ಮುಟ್ಟುವ ಹಾಸ್ಯಕ್ಕೆ ಹೆಚ್ಚು ಶಕ್ತಿಯಿದೆ. ಶಾಂತರಾಜ ಐತಾಳ್‌ ಹಾಸ್ಯದ ಮೂಲಕ ವೈಜಾರಿಕ ಪ್ರಜ್ಞೆ ಮೂಡಿಸಿದ್ದಾರೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ ಮಾತನಾಡಿದರು. ಸುಹಾಸಂ ಸಂಸ್ಥೆಯ ಕಾರ್ಯದರ್ಶಿ ಎಚ್. ಗೋಪಾಲ ಭಟ್ಟ
ಉಪಸ್ಥಿತರಿದ್ದರು. ಲೇಖಕರು ಆದ ಸುಹಾಸಂ ಅಧ್ಯಕ್ಷ ಶಾಂತರಾಜ ಐತಾಳ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.