ಕಾನೂನುಗಳ ಸಮರ್ಪಕ ಅನುಷ್ಠಾನದಿಂದ ಸಮಾಜಿಕ‌ ಬದಲಾವಣೆ: ರಾಜಶೇಖರ್

ಉಡುಪಿ: ಭಾರತದಲ್ಲಿ ಸಂವಿಧಾನ ಸಾಮಾಜಿಕ ನ್ಯಾಯದ ಮೂಲವಾಗಿದೆ. ಆದ್ದರಿಂದ ಸಂವಿಧಾನಿಕ ಧ್ಯೇಯೋದ್ದೇಶಗಳು ಹಾಗೂ ಕಾನೂನುಗಳ ಸಮರ್ಪಕ ಅನುಷ್ಠಾನದಿಂದ ಸಾಮಾಜಿಕ ಬದಲಾವಣೆ ತರಬಹುದು ಎಂದು ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ರಾಜಶೇಖರ್‌ ಸೀತಾರಾಮನ್‌ ಮಲುಶ್ತೆ ಹೇಳಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳು ಕಾನೂನು ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಬೇಕು. ಕಾನೂನು ಪ್ರಕರಣಗಳ ವಸ್ತುಸ್ಥಿತಿಗೆ ಅನುಗುಣವಾಗಿರುವ ಕಾನೂನು ಉಪಬಂಧಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ವಕೀಲ ವೃತ್ತಿಯಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯ ಎಂದರು.
ಹಿಂದಿನ ಕಾಲದಲ್ಲಿ ಕಾನೂನು ವಿದ್ಯಾಭ್ಯಾಸ ಮಾಡಲು ಹೆಚ್ಚಿನವರು ಆಸಕ್ತಿ ತೋರುತ್ತಿರಲಿಲ್ಲ. ಆದರೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾನೂನಿನ ಜ್ಞಾನದ ಅವಶ್ಯಕತೆ ಇರುವುದರಿಂದ, ಕಾನೂನು ಪದವಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಅದನ್ನು ಕಾನೂನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್‌ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಮಾಧವಾಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ಸಾಧನಾ ಪ್ರಾರ್ಥಿಸಿದರು. ಜೊಯೆನ್ನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮರಿಯಾ ತೇರೆಸಾ ವಂದಿಸಿದರು.