ಉಡುಪಿ: ಬಡಗಬೆಟ್ಟು ಸೊಸೈಟಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ

ಉಡುಪಿ: ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉಡುಪಿ ಟೌನ್ ಹಾಲ್ನಲ್ಲಿ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು, ಕೇಂದ್ರದ ಸಹಕಾರಿ ಸಚಿವಾಲಯದ ಆದೇಶದಂತೆ ಜಿಲ್ಲೆಯಲ್ಲಿ ಮನೆಗೆ ಒಂದರಂತೆ ಒಂದು ಲಕ್ಷ ಗಿಡ ನಡುವ ಸಂಕಲ್ಪ ಮಾಡಲಾಗಿದೆ. ಪರಿಸರ ನಮಗೆ ಸಾಕಷ್ಟು ಕೊಡುಗೆ ಕೊಟ್ಟಿದೆ. ಹೀಗಾಗಿ ಗಿಡ ನೆಟ್ಟು ಅದರ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮವನ್ನು ಉಡುಪಿಯ ತಹಶೀಲ್ದಾರ್ ಪಿ.ಆರ್.ಗುರುರಾಜ್ ಉದ್ಘಾಟಿಸಿದರು. ಉಡುಪಿ ನಗರಸಭೆ ಪರಿಸರ ಅಭಿಯಂತರ ರವಿಪ್ರಕಾಶ್, ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಮುಖ್ಯ ಅತಿಥಿಗಳಾಗಿ ದ್ದರು. ಜೆ.ಸಿ.ಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸುಮಾರು 35 ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 15ಲಕ್ಷ ರೂ. ಮೌಲ್ಯದ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಸಹಕಾರ ವರ್ಷ 2025 ಪ್ರಯುಕ್ತ ಏಕ್ ಪೇಡ್ ಮಾ ಕೆ ನಾಮ್ ಗಿಡ ನೆಡುವ ಸಂಕಲ್ಪದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಸಿಇಓ ಅನುಷಾ ಕೋಟ್ಯಾನ್, ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್, ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಜಯ ಶೆಟ್ಟಿ, ಎಲ್. ಉಮಾನಾಥ್, ಸದಾಶಿವ ನಾಯ್ಕಿ, ವಿನಯ ಕುಮಾರ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು