ರಾಮಮಂದಿರಕ್ಕೆ ಅಂಜನಾದ್ರಿ ಬೆಟ್ಟದ ಶಿಲೆ: ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಮೂಲಕ ಅಯೋಧ್ಯೆಗೆ ರವಾನೆ

ಬೆಂಗಳೂರು: ಶ್ರೀರಾಮಸೇನೆ ಕರ್ನಾಟಕದ ವತಿಯಿಂದ ಹನುಮನ ಜನ್ಮಸ್ಥಳವಾದ ಅಂಜನಾದ್ರಿಯಲ್ಲಿ ತೆಗೆದ ಶಿಲೆಯನ್ನು ಅಯೋಧ್ಯೆಗೆ ಕೊಂಡೊಯ್ಯಲು ರಾಮಮಂದಿರ ನಿರ್ಮಾಣದ ಟ್ರಸ್ಟಿಯು ಆಗುರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈಚೆಗೆ ಹಸ್ತಾಂತರಿಸಲಾಗಿತ್ತು.
ಪೇಜಾವರ ಶ್ರೀಪಾದರು ನೀಲಾವರದ ಶಾಖಾ ಮಠದಲ್ಲಿ ಚಾತುರ್ಮಾಸ್ಯದ ವ್ರತದಲ್ಲಿದ್ದು, ಇದರಿಂದ ಆಗಸ್ಟ್ 5ರಂದು ನಡೆಯುವ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತೆರಳುತ್ತಿಲ್ಲ. ಹಾಗಾಗಿ ಶ್ರೀಗಳ ಸೂಚನೆಯಂತೆ ಶಿಲೆಯನ್ನು ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿಗೆ ಭಾನುವಾರ ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಹಸ್ತಾಂತರಿಸಲಾಯಿತು.
ಸೋಮವಾರ ನಿರ್ಮಲಾನಂದ ಶ್ರೀಗಳು ಶಿಲೆಗೆ ಪೂಜಾಕೈಂಕರ್ಯವನ್ನು ನೆರವೇರಿಸಿ, ಶಿಲೆಯೊಂದಿಗೆ ಅಯೋಧ್ಯಗೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ವಿಜಯನಗರದ ಶಾಖಾ ಮಠದ ಸೌಮೇಂದ್ರ ಸ್ವಾಮೀಜಿ, ಶ್ರೀರಾಮಸೇನೆಯ ಜಿಲ್ಲಾ ಗೌರವಾಧ್ಯಕ್ಷ ಡಿ. ರಾಧಕೃಷ್ಣ ಶೆಟ್ಟಿ, ಮುಖಂಡರಾದ ಶರತ್ ಪೂಜಾರಿ, ಹರೀಶ್ ಪೂಜಾರಿ, ಮಧುಕರ್ ಮುದ್ರಾಡಿ ಮೊದಲಾದವರು ಇದ್ದರು.