ಆ. 23 ಮತ್ತು 24: ಕೃಷ್ಣನ  ಊರಲ್ಲಿ ಅಷ್ಟಮಿ ಸಂಭ್ರಮ: ಬಗೆ ಬಗೆ ಕಾರ್ಯಕ್ರಮ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಆ. 23 ಮತ್ತು 24ರಂದು ಕೃಷ್ಣಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ಸಂಭ್ರಮದಿಂದ ನಡೆಯಲಿದ್ದು ವಿವಿಧ ಕಾರ್ಯಕ್ರಮ ವೈವಿದ್ಯಗಳನ್ನು ಆಯೋಜಿಸಲಾಗಿದೆ. ಅಷ್ಟಮಿಯ ವಿಶೇಷ ಕಾರ್ಯಕ್ರಮಗಳ ಪೂರ್ತಿ ವಿವರ  ಇಲ್ಲಿದೆ.

ಏನೇನ್ ವಿಶೇಷ?

ಆ. 24ರಂದು ಉಡುಪಿ ಕನಕ ಸಾಂಸ್ಕೃತಿಕ ವೇದಿಕೆಯ ಮಧುಸೂದನ ಪೂಜಾರಿ ನೇತೃತ್ವದಲ್ಲಿ ಪೂರ್ವ ಮುಂಬಯಿ ಸಾಂತಾಕ್ರೂಸ್‌ ಬಾಲಮಿತ್ರ ಮಂಡಳಿಯ ಅಲಾರೆ ಗೋವಿಂದ ತಂಡ 50 ಅಡಿ ಎತ್ತರದಲ್ಲಿರುವ ಮಡಿಕೆ ಒಡೆಯಲಿದೆ. ಬೆಳಗ್ಗೆ 9ಕ್ಕೆ ಶ್ರೀಕೃಷ್ಣ ಮಠದ ವಸಂತ ಮಂಟಪದಲ್ಲಿ ಚಾಲನೆಗೊಂಡು, 10ಕ್ಕೆ ಕನಕ ಗೋಪುರದ ಎದುರು, 10.30ಕ್ಕೆ ಕಡಿಯಾಳಿ ಓಶಿಯನ್‌ ಪರ್ಲ್, 11.30ಕ್ಕೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣ, 12ಕ್ಕೆ ಉಡುಪಿ ಪೈ ಇಂಟರ್‌ನ್ಯಾಶನಲ್, 12.30ಕ್ಕೆ ತ್ರಿವೇಣಿ ಸರ್ಕಲ್, 2ಕ್ಕೆ ಕಾಣಿಯೂರು ಮಠ, 2.30ಕ್ಕೆ ಪುತ್ತಿಗೆ ಮಠ, 3ಕ್ಕೆ ಪೇಜಾವರ ಮಠ, 4ಕ್ಕೆ ಕಿದಿಯೂರು ಹೊಟೇಲ್ ಎದುರು, 5ಕ್ಕೆ ಡಯಾನ ಹೊಟೇಲ್ ಎದುರು ಪ್ರದರ್ಶನ ನಡೆಯಲಿದೆ.

ಆ. 23ರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಮಧ್ವಮಂಟಪದಲ್ಲಿ ಪ್ರಸಿದ್ಧ ಭಜನ ತಂಡಗಳಿಂದ ನಡೆಯಲಿರುವ ಭಜನ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12ರಿಂದ ಓಲಗ ಮಂಟಪದಲ್ಲಿ ಪುತ್ತಿಗೆ ಚಂದ್ರಶೇಖರ್‌ ಬಳಗದಿಂದ ಸ್ಯಾಕ್ಸೋಫೋನ್‌ ವಾದನ ನಡೆಯಲಿದೆ.

ಆ. 24ರ ಬೆಳಗ್ಗೆ 9ರಿಂದ 12ರ ವರೆಗೆ ಓಲಗ ಮಂಟಪದಲ್ಲಿ ಪವನ ಬಿ. ಆಚಾರ್‌ ನಿರ್ದೇಶನದಲ್ಲಿ ಪಂಚ ವೀಣಾವಾದನ, ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿ ಭಜನ ಕಾರ್ಯಕ್ರಮ, ಮಾನವ ನಿರ್ಮಿತ ಪಿರಮಿಡ್‌ ‘ಅಲಾರೆ ಗೋವಿಂದ’ ತಂಡದ ಪ್ರದರ್ಶನಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ.

ಅನ್ನ ಸಂತರ್ಪಣೆ:

ಅಷ್ಟಮಿಯಂದು ಪರ್ಯಾಯಶ್ರೀಗಳು ತರಕಾರಿ ಮತ್ತು ಗುಂಡಿಟ್ಟು ಲಡ್ಡು ಮುಹೂರ್ತ ನೆರವೇರಿಸಲಿ ದ್ದಾರೆ. ವಿಟ್ಲಪಿಂಡಿಯಂದು ಬೆಳಗ್ಗೆ 10ಕ್ಕೆ ಪಲಿಮಾರು ಶ್ರೀಪಾದರು ಪಲ್ಲಪೂಜೆ ನಡೆಸಿ, ರಾಜಾಂಗಣದಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆಗೆ ಚಾಲನೆ ನೀಡುವರು.

ಶ್ರೀ ಕೃಷ್ಣನಿಗೆ ಹೂವಿನ ಅಲಂಕಾರ:

ಇದೇ ಸಂದರ್ಭ ತಾಲೂಕಿನ ನಾಲ್ಕು ವಿಶೇಷ ಚೇತನ ಆಶ್ರಮಗಳಿಗೆ ಅನ್ನಪ್ರಸಾದ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಮಿತಿ ವತಿಯಿಂದ ಶ್ರೀಕೃಷ್ಣ ಮಠ ಮತ್ತು ಮುಖ್ಯಪ್ರಾಣ ದೇವರಿಗೆ ವಿಶೇಷ ಹೂವಿನ ಅಲಂಕಾರ ನಡೆಯಲಿದೆ. ಆ. 24ರ ಸಂಜೆ ಕಿದಿಯೂರು ಹೊಟೇಲ್ನ ಪ್ರಾಯೋಜಕತ್ವದಲ್ಲಿ ಹೊಟೇಲ್ನ ಮುಂಭಾಗದಲ್ಲಿ ಮಾನವ ನಿರ್ಮಿತ ಪಿರಾಮಿಡ್‌ ಅಲಾರೆ ಗೋವಿಂದ ಕಾರ್ಯಕ್ರಮ ಮತ್ತು ನೃತ್ಯ ಪ್ರದರ್ಶನ ಜರಗಲಿದೆ ಎಂದು ಸಮಿತಿಯ ಪ್ರಮುಖ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.