ಮುಂದಿನ ವರ್ಷ ಜನವರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ: ಜಿಲ್ಲಾಧಿಕಾರಿ

ಉಡುಪಿ ಮಾ.16: ಜಿಲ್ಲೆಯಲ್ಲಿ ಏಪ್ರಿಲ್ 4 ರಿಂದ 14 ರವರೆಗೆ ನಡೆಯಬೇಕಾಗಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ಮುಂಜಾಗರೂಕತಾ ಕ್ರಮವಾಗಿ ಮುಂದೂಡಲಾಗಿದ್ದು, ಮುಂದಿನ ವರ್ಷ ಜನವರಿಯಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಸೇನಾ ನೇಮಕಾತಿಗೆ ಆನ್‍ಲೈನ್ ಅರ್ಜಿ ಸಲ್ಲಿಸಲು ಫೆಬ್ರವರಿ 16 ರಿಂದ ಮಾರ್ಚ್ 20 ರ ವರೆಗೆ ಅವಕಾಶ ನೀಡಲಾಗಿತ್ತು. ಇದುವರೆಗೂ 31500  ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಕನಿಷ್ಠ 35000 ಅಭ್ಯರ್ಥಿಗಳು ನೋಂದಾಯಿಸಲ್ಪಡುವ ಸಾಧ್ಯತೆಗಳಿವೆ. ಕೊರೋನಾ ರೋಗದ ಹಿನ್ನೆಲೆಯಲ್ಲಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನ ಸೇರುವುದು ಅಪಾಯಕಾರಿಯಾಗಿರುವುದರಿಂದ ಏಪ್ರಿಲ್‍ನಲ್ಲಿ ನಡೆಯಬೇಕಾಗಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ಜನವರಿವರೆಗೆ ಮುಂದೂಡಲಾಗಿದೆ. ಉಡುಪಿಯಲ್ಲಿ 85 ಅಭ್ಯರ್ಥಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಭರವಸೆ ಇದೆ. ರ್ಯಾಲಿಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿರುವ ಜಿಲ್ಲೆಯ ಅಭ್ಯರ್ಥಿಗಳಿಗೆ ಡಿಸೆಂಬರ್‍ನಲ್ಲಿ ತರಬೇತಿ ನೀಡಲಾಗುವುದು. ಯಾವುದೇ ಕಾರಣಕ್ಕೂ ರ್ಯಾಲಿಯನ್ನು ಬೇರೆ ಜಿಲ್ಲೆಯಲ್ಲಿ ನಡೆಸುವ ಉದ್ದೇಶವಿಲ್ಲ ಹಾಗೂ ರ್ಯಾಲಿ ಉಡುಪಿಯಲ್ಲಿಯೇ ನಡೆಯಲಿದೆ  ಎಂದು ಅವರು ತಿಳಿಸಿದರು.

ರ್ಯಾಲಿಯನ್ನು ಮುಂದೂಡಲಾಗಿದ್ದರೂ ಆಸಕ್ತ ಅಭ್ಯರ್ಥಿಗಳು ಮಾರ್ಚ್ 20 ರವರೆಗೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಅವಕಾಶವಿದೆ, ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ನೋಂದಾವಣಿ ಪ್ರಕ್ರಿಯೆಯನ್ನು ಅಕ್ಟೋಬರ್‍ನಲ್ಲಿ 5 ದಿನಗಳವರೆಗೆ ಮತ್ತೊಮ್ಮೆ ತೆರೆಯಲಾಗುವುದು. ಕಾರಣಾಂತರಗಳಿಂದ ಈ ಬಾರಿ ಹೆಸರು ನೋಂದಾಯಿಸಿಕೊಳ್ಳಲಾಗದವರು ಅಕ್ಟೋಬರ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ಈಗಾಗಲೇ ನಿಗದಿಯಾಗಿದ್ದ ರ್ಯಾಲಿಗಳು ಸೆಪ್ಟೆಂಬರ್‍ನಿಂದ ಡಿಸೆಂಬರ್‍ವರೆಗೆ ಯಥಾಪ್ರಕಾರ ನಡೆಯಲಿರುವುದರಿಂದ ಉಡುಪಿಯಲ್ಲಿ ನಡೆಯಬೇಕಿರುವ ರ್ಯಾಲಿಯನ್ನು ಮುಂದಿನ ವರ್ಷ ಜನವರಿಯಲ್ಲಿ ನಡೆಸಲಾಗುವುದು. ರ್ಯಾಲಿಯ ಪೂರ್ವಸಿದ್ದತೆಗಾಗಿ ಶ್ರಮಿಸಿದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸಿದ ಸೇನಾ ನೇಮಕಾತಿ ಅಧಿಕಾರಿ  ಕರ್ನಲ್ ಪಿ ದುಭಾಶ್, ಇದೆ ರೀತಿಯ ಸಹಕಾರ ಮುಂದಿನ ದಿನಗಳಲ್ಲಿಯೂ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಎಎಸ್‍ಪಿ ಕುಮಾರ್‍ಚಂದ್ರ, ಡಿಡಿಪಿಐ ಶೇಷಶಯನ ಕಾರಿಂಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.