ಉಡುಪಿ:ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು, ಇವುಗಳಿಂದ ಸಾರ್ವಜನಿಕರಿಗೆ ತೊಂದರೆಉಂಟಾಗುತ್ತಿವೆ ಇವುಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರುಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಸಮಿತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ದಿನೇದಿನೇ ನಾಯಿಗಳ ಸಂಖ್ಯೆ ಹೆಚ್ಚುತ್ತಿವೆ. ರಾತ್ರಿ ಸಮಯದಲ್ಲಿ ರೈಲು ಮತ್ತು ಬಸ್ಸಿನಲ್ಲಿ ಪ್ರಯಾಣಿಸಿ ಬಂದAತಹಸಾರ್ವಜನಿಕರ ಮೇಲೆ ಎರಗುತ್ತವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯೇ ಮಾರ್ಗವಾಗಿದ್ದು ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷವೂ ಹಣಕಾಸು ಹಂಚಿಕೆ ಮಾಡಿಕೊಳ್ಳುವುದರೊಂದಿಗೆ ಅವುಗಳ ಸಂತಾನ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಎಬಿಸಿ ಕಾರ್ಯಕ್ರಮವನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಸ್ವಚ್ಚ ಹಾಗೂ ನೈರ್ಮಲ್ಯತೆ ಇರುವ ಶಸ್ತ್ರ ಚಿಕಿತ್ಸಾ ಕೊಠಡಿ, ಅವಶ್ಯಪ್ರಮಾಣದ ಕೆನೆಲ್ ಗಳು ನಾಯಿಗಳನ್ನು ವೈಜ್ಞಾನಿಕವಾಗಿ ಹಿಡಿಯುವ ವ್ಯವಸ್ಥೆ, ಶಸ್ತ್ರ ಚಿಕಿತ್ಸಾ ಕ್ರಮದ ನಂತರ ಅವುಗಳನ್ನು ನಾಲ್ಕು ದಿನಗಳಕಾಲ ಆರೈಕೆಗೆ ವ್ಯವಸ್ಥೆ, ನುರಿತ ಶಸ್ತ್ರ ಚಿಕಿತ್ಸಾ ತಜ್ಞರು ಹಾಗೂ ಸಿಬ್ಬಂದಿಗಳನ್ನು ನಿಯೋಜನೆಯೊಂದಿಗೆ ಅಥವಾ ಭಾರತೀಯ ಪ್ರಾಣಿ ಕಲ್ಯಾಣಮಂಡಳಿಯಲ್ಲಿ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆಯ ಗುತ್ತಿಗೆ ನೀಡುವುದರೊಂದಿಗೆ ಅನುಷ್ಠಾನಗೊಳಿಸಬೇಕು ಎಂದರು.

ಪ್ರಾಣಿ ಪಕ್ಷಿಗಳಿಗೂ ಸಹ ಭೂಮಿ ಮೇಲೆ ನಮ್ಮ ಹಾಗೆ ಬದುಕುವ ಹಕ್ಕನ್ನು ಹೊಂದಿವೆ. ಅವುಗಳನ್ನು ಉಲ್ಲಂಘಿಸಿ ಪ್ರಾಣಿ-ಪಕ್ಷಿಗಳಿಗೆ ಅನುಚಿತವಾಗಿ ವರ್ತಿಸುವುದು, ಹಿಂಸೆನೀಡುವುದು ಕಂಡುಬಂದಲ್ಲಿ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು.ಪ್ರಾಣಿಪಕ್ಷಿಗಳನ್ನು ಪ್ರೀತಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಲಯವು ಬೀದಿ ನಾಯಿಗಳ ಹಾವಳಿಯ ನಿಯಂತ್ರಣ ಹಾಗೂ ಜನರಿಗೆ ರಕ್ಷಣೆ ಒದಗಿಸುವಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಂಚಾಯತಿಗಳು ಆಗಿದೆ ಎಂದಿದ್ದು, ಎಬಿಸಿ ಕಾರ್ಯಕ್ರಮದ ಅನುಷ್ಠಾನದಜೊತೆಗೆ ಅವುಗಳಿಗೆ ಆಹಾರ ನೀಡಲು ವಾರ್ಡ್ವಾರು ನಿಗದಿತ ಸ್ಥಳಗಳನ್ನು ಗುರುತಿಸಲು, ರೇಬೀಸ್ ರೋಗ ಪೀಡಿತ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುವ ನಾಯಿಗಳನ್ನು ಪ್ರತ್ಯೇಕ ಶೆಲ್ಟರ್ ಗಳಲ್ಲಿ ಇಡುವುದರೊಂದಿಗೆ ಲಸಿಕೆ ಹಾಗೂ ಪ್ರತಿರೋಧಕಗಳನ್ನು ನೀಡುವುದರ ಜೊತೆಗೆಹೆಲ್ಪ್ ಲೈನ್ ಗಳನ್ನು ಸ್ಥಾಪಿಸಲು ನಿರ್ದೇಶಿಸಿದೆ ಎಂದರು.

ರೇಬೀಸ್ ಹಾಗೂ ಪ್ರಾಣಿಜನ್ಯ ರೋಗಗಳ ಲಸಿಕಾ ಅಭಿಯಾನ ಕಾರ್ಯಕ್ರಮದಡಿ ಸಾಕು ಹಾಗೂ ಬೀದಿಯ ನಾಯಿ ಮತ್ತು ಬೆಕ್ಕುಗಳಿಗೆ ರೇಬೀಸ್ಲಸಿಕೆಗಳನ್ನು ಉಚಿತವಾಗಿ ಜಿಲ್ಲೆಯ ಪ್ರತಿಯೊಂದು ಪಶು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿ ಹಾಗೂಬೆಕ್ಕುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಬೀದಿ ನಾಯಿಗಳಿಗೂ ಸಹ ಲಸಿಕೆ ನೀಡುವುದರೊಂದಿಗೆ ರಾಜ್ಯವನ್ನು 2030 ರೊಳಗೆ ರೇಬೀಸ್ ಮುಕ್ತರಾಜ್ಯವನ್ನಾಗಿಸಲು ಮುಂದಾಗಬೇಕು ಎಂದರು.

ಪಶು ಸಂಜೀವಿನಿ ಯೋಜನೆಯಡಿ ರೈತರ ಮನೆ ಬಾಗಿಲಿಗೆ ಪಶು ವೈದ್ಯಕೀಯ ತುರ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲು ಸಹಾಯವಾಣಿ 1962 ನಲ್ಲಿ ಆಂಬುಲೆನ್ಸ ಅನ್ನು ಒದಗಿಸಲಾಗಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದ ಅವರು ಜಿಲ್ಲೆಯಲ್ಲಿ ಕಳೆದಏಪ್ರಿಲ್ ನಿಂದ ಈವರೆಗೂ 2093 ಪಶುಗಳು ಇವುಗಳ ಪ್ರಯೋಜನ ಪಡೆದಿವೆ ಎಂದರು.

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕೆರೆಕಟ್ಟೆಯ ಖಾಸಗಿಯವರು ಅಪಘಾತ, ಅನಾರೋಗ್ಯ ಸೇರಿದಂತೆ ಮತ್ತಿತರ ನ್ಯೂನ್ಯತೆ ಹೊಂದಿದ ಪ್ರಾಣಿಗಳ ಪಾಲನೆ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಅವುಗಳ ನಿರ್ವಹಣೆ ಸಮರ್ಪಕ ಹಾಗೂ ಕಾನೂನಿನ ರೀತಿಯಲ್ಲಿ ಆಗುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಸಾಲಿಗ್ರಾಮ ಸ್ಥಳೀಯ ಸಂಸ್ಥೆ, ಅರಣ್ಯ ಇಲಾಖೆಯವರು ಪಶು ಪಾಲನಾ ಇಲಾಖೆಯವರು ಹಾಗೂ ಪ್ರಾಣಿದಯಾ ಸಂಸ್ಥೆಯವರು ಭೇಟಿ ನೀಡಿ ಪಂಚನಾಮೆ ನಡೆಸುವುದರೊಂದಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

2024-25 ಸಾಲಿನಲ್ಲಿ ಎಬಿಸಿ ಕಾರ್ಯಕ್ರಮದ ಅನ್ವಯ ಜಿಲ್ಲೆಯಲ್ಲಿ 534 ಗಂಡು ಹಾಗೂ 1220 ಹೆಣ್ಣು ಸೇರಿದಂತೆ ಒಟ್ಟು 1754 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಆಗಸ್ಟ್ ವರೆಗೆ 183 ಗಂಡು, 558 ಹೆಣ್ಣು ಸೇರಿದಂತೆ 771 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದ ಅವರು, ಪ್ರಸಕ್ತ ಸಾಲಿನ ಕೊನೆಯ ಒಳಗಾಗಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕಾರ್ಯವನ್ನು ಹೆಚ್ಚಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ ರೆಡ್ಡಪ್ಪ, ನಗರಸಭೆ ಮಹಾಂತೇಶ್ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.