ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ಹಾಗೂ ನಾರಾಯಣ ಗುರುಗಳ ಸ್ತಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಉಡುಪಿ ಜಿಲ್ಲೆಯ ಸಮಸ್ತ ಬಿಲ್ಲವ ಸಂಘ ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ವರ್ಷದ ಗಣರಾಜ್ಯೋತ್ಸವ ಪರೇಡಿಗೆ ಕೇರಳ ಸರ್ಕಾರ ಕಳುಹಿಸಿರುವ ಮಹಾಮಾನವತಾವಾದಿ, ಸಾಮಾಜಿಕ ಸಮಾನತೆಯ ಹರಿಕಾರರಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರವು ಅವಕಾಶ ನಿರಾಕರಣೆ ಮಾಡಿ ಅಗೌರವ ತೋರಿದೆ. ಆ ಮೂಲಕ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಜನರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ನಿಯೋಗದ ಸದಸ್ಯರು ದೂರಿದರು.
ನಾರಾಯಣ ಗುರುಗಳ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿರುವ ಕೇಂದ್ರ ಸರ್ಕಾರದ ನಿಲುವು ಖಂಡನೀಯ. ಕೂಡಲೇ ತಮ್ಮಿಂದ ಆಗಿರುವ ಪ್ರಮಾದವನ್ನು ಸರ್ಕಾರ ಸರಿಪಡಿಸಿಕೊಂಡು, ನಾರಾಯಣಗುರುಗಳ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಉಡುಪಿ ಜಿಲ್ಲೆಯ 34 ಬಿಲ್ಲವ ಸಂಘಗಳ ಪರವಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಹಿರಿಯಡಕ ಬಿಲ್ಲವ ಸಂಘದ ಅಧ್ಯಕ್ಷ ಮಲ್ಪೆ ರಾಘವೇಂದ್ರ ಮಾಸ್ಟರ್ ಮತ್ತು ಬೆಳ್ಮಣ್ ಬಿಲ್ಲವ ಸಂಘದ ಅಧ್ಯಕ್ಷ ಎಸ್. ಕೆ. ಸಾಲ್ಯಾನ್ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಗೋಪಾಲ್ ಪೂಜಾರಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಉಪಾಧ್ಯಕ್ಷ ಶ್ರೀಕರ ಅಂಚನ್, ಪ್ರಧಾನ ಕಾರ್ಯದರ್ಶಿ ಶಿವಾನಂದ ಹಾಗೂ ನಾರಾಯಣ ಗುರು ಯುವ ವೇದಿಕೆ ಹಾಗೂ ಯುವ ವಾಹಿನಿ ಘಟಕದ ಅಧ್ಯಕ್ಷರುಗಳು ಮತ್ತು 34 ಬಿಲ್ಲವ ಸಂಘಟನೆಗಳ ಅಧ್ಯಕ್ಷರು ಮತ್ತು ಇತರ ಪ್ರಮುಖರು ಪಾಲ್ಗೊಂಡಿದ್ದರು.