ಉಡುಪಿ: ಮನುವಾದಿಗಳು ತಮ್ಮ ಧಾರ್ಮಿಕ ಹಿತಾಸಕ್ತಿ ಹಾಗೂ ಅಧಿಕಾರ ಶಾಹಿ ವ್ಯವಸ್ಥೆಗೆ ಅಪಾಯ ಎದುರಾಗಬಾರದೆಂಬ ನಿಟ್ಟಿನಿಂದ ಅಂಬೇಡ್ಕರ್‌ನ್ನು ಇತಿಹಾಸದಿಂದ ಮರೆಮಾಚಿಸುವ ವ್ಯವಸ್ಥಿತ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಆರೋಪಿಸಿದರು.
ಶಿಕ್ಷಣ ಇಲಾಖೆ ಮಾಡಿರುವ ಅಂಬೇಡ್ಕರ್ ಅವಹೇಳನವನ್ನು ಖಂಡಿಸಿ ಹಾಗೂ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಯ ವಜಾಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಮತ್ತು ಉಡುಪಿಯ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿದ ಅವಕಾಶಗಳನ್ನು ಪಡೆದುಕೊಂಡಿರುವ ದಲಿತ ಹಾಗೂ ಶೂದ್ರ ಸಮುದಾಯ ಜಾಗೃತಗೊಂಡು, ತಮ್ಮ ಮೇಲೆ ಸವಾರಿ ಮಾಡಬಹುದೆಂಬ ಭಯ ಅನುವಾದಿಗಳಿಗೆ ಕಾಡಿದೆ. ಅದಕ್ಕಾಗಿ ಅಂಬೇಡ್ಕರ್‌ನ್ನು ಇತಿಹಾಸದಿಂದಲೇ ಮರೆಮಾಚುವ ಹುನ್ನಾರಗಳು ನಡೆಯುತ್ತಿವೆ. ಅಂಬೇಡ್ಕರ್ ವಿಚಾರ ಬಂದಾಗ ನಾವು ಯಾವ ಬಲಿದಾನಕ್ಕೂ ಸಿದ್ಧವಿದ್ದೇವೆ. ಈ ಮೂಲಕ ಕೋಮುವಾದಿ ಶಕ್ತಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸಂವಿಧಾನ ಬರೆದಿಲ್ಲ. ಈ ದೇಶದ ಮಣ್ಣಿನ ಮಕ್ಕಳು ಎಂಬ ಕಾರಣಕ್ಕೆ ದಲಿತರಿಗೆ ಮಾನವೀಯತೆ ದೃಷ್ಠಿಯಿಂದ ಕೆಲವೊಂದು ಅವಕಾಶಗಳನ್ನು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ಭಾರತದ ಸಂವಿಧಾನವು ತಾಯಿತನದ ಪ್ರೀತಿಯನ್ನು ಹೊಂದಿರುವ ಸಂವಿಧಾನ. ಅದನ್ನು ಬರೆದವರು ತಾಯಿತನ ಪ್ರೀತಿಯಿಂದ ವಂಚಿತರಾದ ಸಮುದಾಯಕ್ಕೆ ಸೇರಿರುವ ಅಂಬೇಡ್ಕರ್ ಎಂದರು.
ಮೂಲಭೂತವಾದಿ ಸಂಘಟನೆಗಳು, ಮನುವಾದಿಗಳಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು ವಿರೋಧಿಗಳಲ್ಲ. ಬದಲಾಗಿ ದಲಿತರು ನಿಜವಾದ ಶತ್ರುಗಳು ಎಂದು ಅವರ ಶಿಬಿರ ಹಾಗೂ ಬೈಠಕ್‌ಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ ಎಂದು ಹೇಳಿದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಚಿಂತಕ ನಗರಿಬಾಬ, ಚಿಂತಕ ಜಿ. ರಾಜಶೇಖರ್, ಧರ್ಮಗುರು ವಿಲಿಯಂ ಮಾರ್ಟಿಸ್, ದಲಿತ ಮುಖಂಡರಾದ ಶ್ಯಾಂರಾಜ್ ಬಿರ್ತಿ, ಮಂಜುನಾಥ ಬಾಳೆಕುದ್ರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.