ಉಡುಪಿ: ಮುಂಗಡ ಹಣದ ವಿಚಾರದಲ್ಲಿ ಗಲಾಟೆ: ಅಂಗಡಿ ಮಾಲೀಕನ ಮೇಲೆ ಆ್ಯಸಿಡ್ ದಾಳಿ

ಉಡುಪಿ: ಬಾಡಿಗೆ ಮನೆಯ ಮುಂಗಡ ಹಣದ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ಅಂಗಡಿ ಮಾಲೀಕನ ಮೇಲೆ ಆ್ಯಸಿಡ್ ಎರಚಿ, ತಲವಾರಿನಿಂದ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಕುಂಜಿಬೆಟ್ಟು ಬುಡ್ನಾರು 4ನೇ ಕ್ರಾಸ್‌ನ ನವೀನ್ ಕುಮಾರ್ (58) ಗಾಯಗೊಂಡಿದ್ದು, ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂಜಿಬೆಟ್ಟು ಎಂಜಿಎಂ ಮೈದಾನದ ಬಳಿಯ ನಿವಾಸಿ ಸುರೇಶ್ ಆಚಾರ್ಯ (48) ಬಂಧಿತ ಆರೋಪಿ.

ನವೀನ್ ಕುಮಾರ್ ಅವರು ವಿಷ್ಣುಮೂರ್ತಿ ನಗರದ ಮನೆಯೊಂದರ ಮೊದಲ ಮಹಡಿಯನ್ನು ಸುರೇಶ್ ಆಚಾರ್ಯ ಅವರಿಗೆ ಬಾಡಿಗೆಗೆ ನೀಡಿದ್ದರು. ಮನೆ ಖಾಲಿ ಮಾಡುವಾಗ ಗೋಡೆ ಹಾಗೂ ಟ್ಯಾಪ್ ಹಾನಿಗೊಳಿಸಿದ್ದರಿಂದ ಮುಂಗಡದ ₹20 ಸಾವಿರದಲ್ಲಿ ಎರಡು ತಿಂಗಳ ಬಾಡಿಗೆ ಮತ್ತು ದುರಸ್ತಿ ವೆಚ್ಚ ಕಡಿತಗೊಳಿಸುವುದಾಗಿ ನವೀನ್ ತಿಳಿಸಿದ್ದರು. ಇದಕ್ಕೆ ಒಪ್ಪದ ಸುರೇಶ್, ಪೂರ್ಣ ಹಣ ನೀಡುವಂತೆ ಒತ್ತಾಯಿಸಿ ಅ.23ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಅ.28ರಂದು ಸಂಜೆ 3.30ರ ಸುಮಾರಿಗೆ ಅಂಗಡಿಗೆ ಬಂದ ಸುರೇಶ್, ಬಾಡಿಗೆ ಹಣದ ವಿಚಾರವಾಗಿ ಮತ್ತೆ ಗಲಾಟೆ ನಡೆಸಿದ್ದಾನೆ. ಬಳಿಕ ಸ್ಕೂಟರ್‌ನಿಂದ ಬಾಟಲಿ ಮತ್ತು ತಲವಾರು ತಂದು ನವೀನ್ ಅವರ ಮೇಲೆ ಆ್ಯಸಿಡ್ ಎರಚಿ, ತಲವಾರಿನಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದಾಳಿಯಿಂದ ನವೀನ್ ಅವರ ಮುಖ, ಕೈ, ಹೊಟ್ಟೆ, ಸೊಂಟ ಹಾಗೂ ಪಾದಗಳಿಗೆ ಸುಟ್ಟ ಗಾಯಗಳಾಗಿವೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ವಿಶೇಷ ತಂಡ ಆರೋಪಿಯನ್ನು ಎಂಜಿಎಂ ಮೈದಾನದ ಬಳಿ ಬಂಧಿಸಿದೆ.

ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ತಲವಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.