ಉಡುಪಿ: ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಕುಂತಾಲಕಟ್ಟೆ ಎಂಬಲ್ಲಿ ದಾಳಿ ನಡೆಸಿದ ಅಬಕಾರಿ ಪೊಲೀಸರು ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 64.800 ಲೀ ಮದ್ಯವನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಶಿಲಾವನ ಜೋಗಿ ಬೆಟ್ಟುವಿನ ಮಂಜುನಾಥ ಕುಂದರ್ ಬಂಧಿತ ಆರೋಪಿ.
ಉಡುಪಿ ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೆಸ್ ಅವರ ನಿರ್ದೇಶನದ ಮೇರೆಗೆ ಉಡುಪಿ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ವಲಯ-2 ರ ಅಬಕಾರಿ ನಿರೀಕ್ಷಕರು, ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಬುಧವಾರ ಬ್ರಹ್ಮಾವರ ತಾಲೂಕು ಸೈಬ್ರಕಟ್ಟೆಯಿಂದ ಶಿರೂರು ಮೂರುಕೈಗೆ ಹೋಗುವ ರಸ್ತೆಯ ಬನ್ನೇರಳು ಕಟ್ಟೆ ಎಂಬಲ್ಲಿ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಪ್ರಸನ್ನ ಎಂಬುವವರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 6.480 ಲೀ ಮದ್ಯವನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ, ವಾಹನ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.