ರಾಜ್ಯದಲ್ಲಿ ಶೀಘ್ರವೇ ನಾರಿ ಅದಾಲತ್ ಆರಂಭ: ಶ್ಯಾಮಲಾ ಕುಂದರ್

ಉಡುಪಿ: ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಶೀಘ್ರವೇ ನಾರಿ ಅದಾಲತ್‌ ಆರಂಭಿಸಲಾಗುವುದು. ಆ ಮೂಲಕ ಮಹಿಳೆಯರ ಸಮಸ್ಯೆಗಳಿಗೆ‌ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌ ಹೇಳಿದರು.
ಅಲೆವೂರು ಮಹಿಳಾ ಸಂಘ ರಾಂಪುರ ವತಿಯಿಂದ ಅಲೆವೂರು ಯುವಕ ಸಂಘದ ಸಹಯೋಗದೊಂದಿಗೆ ಅಲೆವೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಮಹಿಳೆ ಮತ್ತು ಆರೋಗ್ಯ’ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆ ನಿರ್ವಹಣೆ ಜತೆಗೆ ಸಮಾಜ ಮುಖಿಯಾಗಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮಹಿಳೆ, ತನ್ನ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದರು.
ನಾನು ಮಹಿಳೆಯರ ಅಭಿವೃದ್ಧಿಗೆ ದ್ವನಿಯಾಗುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ನಾಲ್ಕು ರಾಜ್ಯಗಳ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿಸಿದರು.
ಸ್ತ್ರೀರೋಗ ತಜ್ಞೆ ಡಾ. ರಾಜಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕಿ ಭಾಗ್ಯಶ್ರೀ ಐತಾಳ್‌ ಅಧ್ಯಕ್ಷತೆ ವಹಿಸಿದ್ದರು.
ಕೆಮ್ತೂರು ಯುವತಿ ಮಂಡಲದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ವಿ.
ಆಚಾರ್ಯ, ಮಾರ್ಪಳ್ಳಿ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ, ಅಲೆವೂರು ಯುವಕ ಸಂಘದ ಅಧ್ಯಕ್ಷ ಉಮೇಶ್‌ ಸೇರಿಗಾರ್‌, ಗೌರವಾಧ್ಯಕ್ಷ ಆನಂದ ಸೇರಿಗಾರ್‌, ಅಲೆವೂರು ಮಹಿಳಾ ಸಂಘದ ಗೌರವಾಧ್ಯಕ್ಷೆ ಮಮತಾ ಶೆಟ್ಟಿಗಾರ್‌, ಅಧ್ಯಕ್ಷೆ ಮಲ್ಲಿಕಾ, ವಾರಿಜಾ ಎಸ್‌. ಶೆಟ್ಟಿ, ಸಂಘಟಕಿ ರಮಾ ಜೆ. ರಾವ್‌ ಉಪಸ್ಥಿತರಿದ್ದರು.
ಅಲೆವೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌ ಪ್ರಾಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಕುಸುಮಾವತಿ ಹರೀಶ್‌ ಸ್ವಾಗತಿಸಿ, ವೀಣಾ ಜಯರಾಂ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.