ಅಕ್ರಮ ಮರಳುಗಾರಿಕೆ: ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸರಕಾರಕ್ಕೆ ಶಿಫಾರಸ್ಸು

ಉಡುಪಿ: ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ, ಸಾಗಾಣಿಕೆ ಅಥವಾ ದಾಸ್ತಾನು ಮಾಡುತ್ತಿರುವ ಪ್ರಕರಣಗಳು ಪುನರಾವರ್ತನೆ ಆದಲ್ಲಿ, ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.
ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಆರಂಭವಾದ ಬಳಿಕ ಅನಧಿಕೃತ ಮರಳುಗಾರಿಕೆ, ಸಾಗಾಟ ಮತ್ತು ದಾಸ್ತಾನು ವಿರುದ್ಧ ನ್ಯಾಯಾಲಯದಲ್ಲಿ 23 ಖಾಸಗಿ ದೂರು ದಾಖಲಾಗಿವೆ.
ಹಾಗಾಗಿ ಸಿಆರ್‌ಝಡ್‌ ಮತ್ತು ನಾನ್‌ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ‌ ತೆರವುಗೊಳಿಸಲು ಹಾಗೂ ಬಜೆ ಡ್ಯಾಂನಲ್ಲಿ ಹೂಳೆತ್ತಿ, ಸದರಿ ಹೂಳಿನಲ್ಲಿ ದೊರಕುವ ಮರಳನ್ನು ಬೇರ್ಪಡಿಸಿ ಸಾಗಾಟ ಮಾಡಲು ಅನುಮತಿ ಪಡೆದಿರುವ ಪರವಾನಿಗೆದಾರರು ಅಥವಾ ಇತರರು ಅನಧಿಕೃತ ಮರಳುಗಾರಿಕೆ, ಮರಳು ಸಾಗಾಟ ಮತ್ತು ದಾಸ್ತಾನು ಮಾಡುತ್ತಿರುವುದು
ಕಂಡುಬಂದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿದೆ. ಹಾಗೆಯೇ ಸಾರ್ವಜನಿಕರು ಅಗತ್ಯವಿರುವಷ್ಟು ಮರಳನ್ನು ಮಾತ್ರ ಸಾಗಾಟ ಪರವಾನಿಗೆಯೊಂದಿಗೆ ದಾಸ್ತಾನಿರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.