ಡಿ.18-21: ಉಡುಪಿಯಲ್ಲಿ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ‌;  20 ಮಂದಿ ಪ್ರೋ ಕಬಡ್ಡಿ ಆಟಗಾರರು ಭಾಗಿ

ಉಡುಪಿ: ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಿಭಾಗದ ಕಬಡ್ಡಿ ಚಾಂಪಿಯನ್‌ ಶಿಪ್‌ ಡಿ. 18ರಿಂದ 21ರ ವರೆಗೆ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೊ. ಎ.ಎಂ. ಖಾನ್‌ ಹೇಳಿದರು.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯದ ಪದವಿ ಕಾಲೇಜುಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಬಡ್ಡಿ ಚಾಂಪಿಯನ್‌ ಶಿಪ್‌ ನಡೆಯುತ್ತಿದ್ದು, ಇದರಲ್ಲಿ ದೇಶದ ಪೂರ್ವ, ಉತ್ತರ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ವಿಜೇತರಾದ 16 ವಿವಿಯ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು. ಪ್ರೊ. ಕಬಡ್ಡಿಯ 20 ಆಟಗಾರರು ಪಾಲ್ಗೊಳ್ಳುವರು. ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಮಾಣದ ಜತೆಗೆ ಟ್ರೋಫಿಯನ್ನು ವಿತರಣೆ ಮಾಡಲಾಗುವುದು. ಡಿ. 18ರಂದು ಬೆಳಿಗ್ಗೆ 10ಗಂಟೆಗೆ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಟೂರ್ನಿಗೆ ಚಾಲನೆ ನೀಡುವರು. ಮಂಗಳೂರು ವಿವಿಯ ಉಪಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು ಎಂದರು.
ಕೇಂದ್ರ ಕ್ರೀಡಾ ಸಚಿವ ಕಿರೆನ್‌ ರಿಜುಜು, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಈಶ್ವರಪ್ಪ, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ,‌ ಶಾಸಕ ಕೆ. ರಘುಪತಿ ಭಟ್‌,  ಭಾರತ ಕಬಡ್ಡಿ ತಂಡದ ನಾಯಕ ಮಣಿಂದರ್‌ ಸಿಂಗ್‌ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಡಿ. 21ರಂದು ರಾತ್ರಿ 8ಗಂಟೆಗೆ ಟೂರ್ನಿಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಸಿ.ಕೆ. ಕಿಶೋರ್‌ ಕುಮಾರ್‌, ಪೂರ್ಣಪ್ರಜ್ಞ ಕಾಲೇಜಿನ ಗೌರವ ಕಾರ್ಯದರ್ಶಿ ಡಾ. ಜಿ.ಎಸ್‌. ಚಂದ್ರಶೇಖರ್‌, ಪ್ರಾಂಶುಪಾಲ ಎ. ರಾಘವೇಂದ್ರ, ಉಪಪ್ರಾಂಶುಪಾಲ ಪ್ರಕಾಶ್‌ ರಾವ್‌, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್‌ ಇದ್ದರು.
ಪ್ರಜ್ಞಾ ಗೌರವ ಪ್ರದಾನ:
ಪೂರ್ಣಪ್ರಜ್ಞ ಕಾಲೇಜಿನ ವಜ್ರಮಹೋತ್ಸವದ ವರ್ಷಾಚರಣೆಯ ಅಂಗವಾಗಿ ಡಿ. 20ರಂದು ಸಂಜೆ 5ಗಂಟೆಗೆ ಕಾಲೇಜಿನ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪ್ರಜ್ಞಾ ಗೌರವ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.
ಕಬಡ್ಡಿ ಕ್ರೀಡೆಯ ಮೂಲಕ ಮಂಗಳೂರು ವಿವಿಯ ಪ್ರತಿಷ್ಠೆಯನ್ನು ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ಕ್ರೀಡಾಪಟುಗಳನ್ನು ಹಾಗೂ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲರನ್ನು ಗುರುತಿಸಿ ‘ಪ್ರಜ್ಞಾ ಗೌರವ’ ಪ್ರದಾನ ಮಾಡಿ ಸನ್ಮಾನಿಸಲಾಗುವುದು ಎಂದರು.