ಉಡುಪಿ:ಕೃಷಿ ಪ್ರಶಸ್ತಿ : ಅರ್ಜಿ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಪ್ರತಿ ಹಂತದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುತ್ತಿದೆ.

ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಬೆಳೆ ಸ್ಪರ್ಧೇಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಸ್ಫರ್ಧಿಗಳಿಂದ ಪಡೆಯಲಾಗುತ್ತಿದ್ದು, ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆಯಲ್ಲಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರು ಕೆ-ಕಿಸಾನ್ ಪೋರ್ಟಲ್‌ನಡಿ ಆರ್.ಎಸ್.ಕೆ ಅಥವಾ ಸಿಟಿಝನ್ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರೀಕ ಸೇವಾ ಕೇಂದ್ರ ಅಥವಾ ಸ್ವತಃ ಆಸಕ್ತ ರೈತ ಹಾಗೂ ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತರ ಎಫ್.ಐ.ಡಿ ಬಳಸಿಕೊಂಡು ಆನ್‌ಲೈನ್ ಮೂಲಕ ಆಗಸ್ಟ್ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ಕನಿಷ್ಠ 1 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ಹಾಗೂ ರೆವಿನ್ಯೂ ದಾಖಲೆಯ ಪ್ರಕಾರ ಖಾತೆ ಹೊಂದಿರುವ ಸ್ವತಃ ಬೇಸಾಯದಲ್ಲಿ ತೊಡಗಿರುವ, ಕ್ರಿಯಾಶೀಲ ರೈತರಾಗಿರುವ ಕುಟುಂಬದ ಒಬ್ಬರು ಮಾತ್ರ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಆನ್‌ಲೈನ್ ಮೂಲಕ ನೋಂದಾಯಿಸುವ ರೈತರು ಹಾಗೂ ರೈತ ಮಹಿಳೆಯರು ಇಲಾಖೆಯ ಮಾರ್ಗಸೂಚಿಯನ್ವಯ ನಿಗಧಿಪಡಿಸುವ ಸ್ಪರ್ಧಾತ್ಮಕ ಇಳುವರಿ ಮಟ್ಟಕ್ಕಿಂತ ಹೆಚ್ಚಿನ ಇಳುವರಿ ಪಡೆದಲ್ಲಿ ಮಾತ್ರ ಸ್ಪರ್ಧೆಯಡಿ ಬಹುಮಾನಕ್ಕೆ ಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.