ಉಡುಪಿ: ಯು-ಆಕ್ಟ್ -ಉಡುಪಿ-ಅಡ್ವೊಕೆಸಿ ಆಫ್ ಕನ್ಸ್ಯುಮರ್ಸ್ ಆಂಡ್ ಸಿಟಿಜನ್ಸ್,
ಜಿಲ್ಲೆಯ ವಕೀಲರ ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆಯಾಗಿದ್ದು, ಗ್ರಾಹಕರಲ್ಲಿ ಮತ್ತು ನಾಗರೀಕರಲ್ಲಿ ಅವರ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವ ಮತ್ತು ಅವಶ್ಯಕತೆ ಇದ್ದಲ್ಲಿ ಅವರಿಗೆ ಕಾನೂನಾತ್ಮಕವಾಗಿ ಪರಿಹಾರ ದೊರಕಿಸಲು ಶ್ರಮಿಸುವ ಸ್ವಯಂ ಸೇವಾ ಸಂಘಟನೆಯಾಗಿದೆ.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಉದ್ಘಾಟನೆಯನ್ನು ನೆರವೇರಿಸಿ,”ಇಂತಹ ಸಮಾಜಮುಖಿ ಸಂಸ್ಥೆಯು ಪ್ರಾರಂಭಗೊಳ್ಳುತ್ತಿರುವುದು ಶ್ಲಾಘನೀಯ. ವಕೀಲರು ಸಾಮಾನ್ಯವಾಗಿ ಕಾನೂನು ಸೇವೆಗಳ ಪ್ರಾಧಿಕಾರದ ಚಟುವಟಿಕೆಗಳಲ್ಲಿ ಕಡಿಮೆ ಭಾಗವಹಿಸುತ್ತಿದ್ದು,ಇದೀಗ ಯು-ಆಕ್ಟ್ ಸಂಸ್ಥೆಯ ಸ್ಥಾಪನೆಯಿಂದ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ಕಾನೂನು ಜಾಗೃತಿ, ವ್ಯಾಜ್ಯಗಳ ಪರಿಹಾರ ದೊರಕಿಸುವಲ್ಲಿ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ದಿಟ್ಟಹೆಜ್ಜೆಯನ್ನಿಟ್ಟಿದ್ದಾರೆ. ಈ ಪ್ರಯತ್ನವು ಯಶಸ್ವಿಯಾಗಲಿದೆ” ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, “ವ್ಯವಸ್ಥೆಯಲ್ಲಿ ಬದಲಾವಣೆ ತರಲು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಂದೆ ಬಂದರೆ ಗ್ರಾಹಕರಿಗೆ, ನೊಂದವರಿಗೆ ಮತ್ತು ಅಶಕ್ತರಿಗೆ ಖಂಡಿತವಾಗಿ ನ್ಯಾಯ ದೊರಕಿಸಬಹುದು. ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಿ, ಸಮಾಜದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಗೆ ಪ್ರಯತ್ನಿಸಲು ನಮ್ಮ ವೇದಿಕೆಯು ಪ್ರಯತ್ನಿಸಲಿದೆ”
ಎಂದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾತನಾಡಿ,” ಜನಸಾಮಾನ್ಯರಿಗೆ ಈ ಸಂಸ್ಥೆಯ ಪ್ರಯೋಜನ ದೊರಕಲಿ. ಈ ವೇದಿಕೆಯು ಉಡುಪಿ ಜಿಲ್ಲೆಗೆ ಉತ್ತಮ ಕೊಡುಗೆ” ಎಂದರು.
ಸಂಸ್ಥೆಯ ವೆಬ್ಸೈಟ್ www.u-act.org ಅನ್ನು ಪ್ರಧಾನ ನ್ಯಾಯಾಧೀಶ ಶಾಂತವೀರ ಶಿವಪ್ಪ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಬಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬಿ.ಸೋಮನಾಥ್ ಹೆಗ್ಡೆ,ಕಾರ್ಕಳ ವಕೀಲರ ಸಂಘದ ಸುನಿಲ್ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಸಿ.ವಿಜಯ್ ಹೆಗ್ಡೆ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ನಜೀರ್ ಪೊಲ್ಯ, ವಕೀಲರಾದ ಕೆ.ರವಿರಾಜ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಪದ್ಮ ಪ್ರಸಾದ್ ಜೈನ್, ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವಿಜಯ್ ಡಿಸೋಜ, ಸುರೇಶ್ ಕಾಮತ್, ಮಾಧವ ಕಾಮತ್, ರಯಾನ್ ಫೆರ್ನಾಂಡಿಸ್, ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ಜಿಲ್ಲೆಯ ವಿವಿಧ ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.