ಉಡುಪಿ: ಆಡಳಿತ ನಿರ್ವಾಹಣ ತರಬೇತಿ ಶಿಬಿರ ಉದ್ಘಾಟನೆ

ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣವಾಗಬೇಕಾದರೆ ಸೂಕ್ತವಾದ ತರಬೇತಿ ಪಡೆಯುವುದು ಅಗತ್ಯ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆಪಿ ಸುಚರಿತ ಶೆಟ್ಟಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಇಂದು ಹಮ್ಮಿಕೊಂಡ ಆಡಳಿತ ನಿರ್ವಾಹಣ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಕಾಯ್ದೆಗಳನ್ನ ಸರ್ಕಾರ ರಚಿಸಿದಾಗ ಅವುಗಳ ಬಗ್ಗೆ ಸೂಕ್ತವಾದ ಮಾಹಿತಿ ಪಡೆದು ಅನುಷ್ಠಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಸೂಕ್ತ ಮಾಹಿತಿ ಇಲ್ಲದಿದ್ದರೆ ಆಡಳಿತ ವ್ಯವಸ್ಥೆಯಲ್ಲಿ ಸಮಸ್ಯೆ ಬರಬಹುದು ಆದ್ದರಿಂದ ಎಲ್ಲರೂ ತರಬೇತಿ ಪಡೆಯುವುದು ಅಗತ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕ ಬಿ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಿಬ್ಬಂದಿಗಳಿಗೆ ವೇತನ ಹೆಚ್ಚು ಮಾಡುವುದರ ಜೊತೆಗೆ ಅವರಿಗೆ ಜವಾಬ್ದಾರಿಯನ್ನ ನೀಡುವುದು ಅಗತ್ಯವಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನ ನೀಡಿದ್ರೆ ಮಾತ್ರ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದರು.

ಸಮಾರಂಭದಲ್ಲಿ ಉಪಾಧ್ಯಕ್ಷ ಅಶೋಕ್ ಕುಮಾರ್ ಬಳ್ಳಾಲ್, ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ, ಸಹಕಾರಿ ಸಂಘಗಳ ನಿರ್ದೇಶಕರು ಉಪಸ್ಥಿತರಿದ್ದರು.