ಉಡುಪಿ: ಕೃಷಿಯ ಬಗ್ಗೆ ಜನಪ್ರತಿನಿಧಿಗಳ ಅಸಡ್ಡೆ ಹಾಗೂ ಸರ್ಕಾರಿ ಯೋಜನೆಗಳನ್ನು ಕೃಷಿಕರಿಗೆ ತಲುಪಿಸಲು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಹೇಳಿದರು.
ಕೃಷಿಕ ಸಂಘದ ಕಲ್ಯಾಣಪುರ ವಲಯ ಸಮಿತಿಯ ವತಿಯಿಂದ ಕೆಳಾರ್ಕಳಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ನೀತಿ, ಆಧುನಿಕ ಭರಾಟೆಯಿಂದ ಅಸಂಘಟಿತರಾಗಿರುವ ಕರಾವಳಿಯ ಸಣ್ಣ ಹಿಡುವಳಿಯ ಕೃಷಿಕರು ಕಂಗಾಲಾಗಿದ್ದಾರೆ. ಕೃಷಿಯಲ್ಲಿ ನಿರೀಕ್ಷಿತ ಆದಾಯ ಪಡೆಸಲು ಸಾಧ್ಯವಾಗದೆ, ಕೃಷಿಯಿಂದ ದೂರ ಸರಿಯುತ್ತಿದ್ದಾರೆ ಎಂದರು.
ಕೃಷಿಕರಿಂದ ಕಿತ್ತುಕೊಳ್ಳುವ ಜಮೀನಿನಲ್ಲಿ ಕೈಗಾರಿಕಾ ಕಾರಿಡಾರ್ ಬದಲು ಕೃಷಿ ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸಬೇಕು. ಇದರಿಂದ ನಶಿಸುತ್ತಿರುವ ಕೃಷಿಯನ್ನು ಉಳಿಸಲು ಸಾಧ್ಯವಿದೆ ಎಂದರು.
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ಭತ್ತವನ್ನು ಉಪ್ಪುನೀರಿನಲ್ಲಿ ಅದ್ದಿ ಜೊಳ್ಳನ್ನು ತೆಗೆಯುವುದು, ನೆರಳಲ್ಲಿ ಇಟ್ಟ 3 ತಿಂಗಳ ಹಟ್ಟಿಗೊಬ್ಬರ ಬಳಕೆ, ತೀರಾ ಅಲ್ಪ ಪ್ರಮಾಣದಲ್ಲಿ ಶಿಲಾರಂಜಕ, ಪೊಟ್ಯಾಷ್ ಬಳಕೆ ಈ ರೀತಿಯ ಚಿಕ್ಕ ಚಿಕ್ಕ ಬದಲಾವಣೆಗಳಿಂದ ಎಕರೆಗೆ 30 ಕ್ವಿಂಟಾಲಿಗಿಂತ ಅಧಿಕ ಭತ್ತದ ಇಳುವರಿ ಪಡೆಯಬಹುದು ಎಂದರು.
ನಿವೃತ್ತ ಅಧ್ಯಾಪಕಿ ಕಮಲಾಬಾಯಿ ಕೆಳಾರ್ಕಳಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಾನಂದ ನಾಯ್ಕ್, ಕೆಳಾರ್ಕಳಬೆಟ್ಟು ರಘರಾಮ ನಾಯಕ್, ಪುರುಷೋತ್ತಮ ರಾವ್, ಸುದರ್ಶನ, ಗಂಗಾಧರ ನಾಯಕ್, ವಿಠಲ ಶೆಟ್ಟಿ, ರಘುಪತಿ ನಾಯ್ಕ್, ಉದಯ ಶೆಟ್ಟಿ ಬೆಳ್ಕಲೆ ಮೊದಲಾದವರು ಉಪಸ್ಥಿತರಿದ್ದರು. ವಲಯ ಸಮಿತಿಯ ಅಶೋಕ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.